






ಬೆಳ್ತಂಗಡಿ: ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿಯ ಆಶ್ರಯದಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಭೂಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶವು ಚರ್ಚ್ರೋಡ್ ಸಿವಿಸಿ ಹಾಲ್‌ನಲ್ಲಿ ಡಿ.23ರಂದು ಜರಗಿತು.
ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರ ಬಳಿಯಿಂದ ಮೆರವಣಿಗೆ ಹೊರಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಬೆಳ್ತಂಗಡಿ ಅಯ್ಯಪ್ಪಗುಡಿಯ ಬಳಿಯಿಂದ ಹೊರಟು ಮುಖ್ಯರಸ್ತೆಯ ಮೂಲಕ ಸಾಗಿದ ಜಾಥಾವು ‘ನಮ್ಮಭೂಮಿ-ನಮ್ಮಹಕ್ಕು’ ಘೋಷಣೆಗಳೊಂದಿಗೆ ಸಿ.ವಿ.ಸಿ ಹಾಲ್ ಗೆ ಸಾಗಿತು. ಸಮಾವೇಶದಲ್ಲಿ ಭೂಮಿಗೆ ಸಂಬಂಧಿಸಿ 11 ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ 3 ಹಕ್ಕೊತ್ತಾಯಗಳು ಮಂಡಿಸಲಾಯಿತು.
ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿ ಸಂಚಾಲಕ ಎಂ.ಬಿ. ಕರಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಸಮಾವೇಶದ ಉದ್ದೇಶವನ್ನು ತಿಳಿಸಿದರು.
ವೇದಿಕೆಯಲ್ಲಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್, ಚಿಂತಕ ಸಾಹಿತಿ ಲಕ್ಷ್ಮೀಶ ತೋಳ್ವಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಚಾಲಕ ರಮೇಶ್ ಆರ್, ಸಿ.ಪಿ.ಐ(ಎಮ್) ಕಾರ್ಯದರ್ಶಿ ಬಿ.ಎಂ. ಭಟ್, ಬೆಂಗಳೂರಿನ ಪೋಲಿಸ್ ವಾಣಿ ಪತ್ರಿಕೆಯ ಸಂಪಾದಕ ರಾಘವೇಂದ್ರ ಆಚಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸಿ.ಕೆ ಚಂದ್ರಕಲಾ, ಪ್ರಮುಖರಾದ ಸದಾಶಿವ ಹೆಗ್ಡೆ, ಬಾಬಿ ಮಾಲಾಡಿ, ಸಹ ಸಂಚಾಲಕರಾದ ಬಾಬು ಎ., ನಾರಾಯಣ ಕಿಲಂಗೋಡಿ, ಸುಕೇಶ್ ಮಾಲಾಡಿ ಉಪಸ್ಥಿತರಿದ್ದರು.









