






ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಶಾಂತಿವನ ಕೇಂದ್ರದಲ್ಲಿ 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಭವ್ಯವಾಗಿ ಆಚರಿಸಲಾಯಿತು, ನಿಸರ್ಗ, ನೈರ್ಮಲ್ಯ ಮತ್ತು ನಿಸರ್ಗೋಪಚಾರದ ಸತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಆರೋಗ್ಯಜಾಗೃತಿಯ ಮಹತ್ವವನ್ನೊತ್ತಿ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಸೀಂ ಬಿ.ಐ, ಪಿ.ಎಸ್. ಗ್ರೇಡ್-2, ಕರ್ನಾಟಕ ಸರ್ಕಾರದ ಕಾರ್ಯದರ್ಶಿಯ ವಸತಿ, ವಿಧಾನಸೌಧ, ಬೆಂಗಳೂರು ತಮ್ಮ ಅನುಭವವನ್ನು ಮನಮುಟ್ಟುವ ರೀತಿಯಲ್ಲಿ ಹಂಚಿಕೊಂಡರು.
‘ಶಾಂತಿವನ ನನಗೆ ತವರುಮನೆ, ನಾನು ಪ್ರತಿ ಆರು ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಆರೋಗ್ಯವನ್ನು ಪುನರುಜ್ಜಿವನಗೊಳಿಸಿಕೊಂಡಿರುತ್ತೇನೆ. ಇಲ್ಲಿ ಹೆಚ್ಚಿನ ಜಾಹೀರಾತು ಇಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಇಲ್ಲ -ಜನಮುಖೇನ ಬಂದ ಹೆಸರು ಮಾತ್ರ ಇವರೆಗೂ ನಾನು 6ಕ್ಕಿಂತಲೂ ಹೆಚ್ಚು ಬಾರಿ ಬಂದಿದ್ದೇನೆ. ಇದು ಲಾಭಕ್ಕಾಗಿ ನಡೆಯುವ ಸಂಸ್ಥೆಯಲ್ಲ, ಶುದ್ಧ ಸೇವೆಯ ಮಂದಿರ, 20 ವರ್ಷಗಳಿಂದ ನಾನು ಇದನ್ನು ಹತ್ತಿರದಿಂದ ಕಂಡಿದ್ದೇನೆ” ಎಂದರು. ಅವರ ಮಾತುಗಳು ಶಾಂತಿವನದ ನಿಸ್ವಾರ್ಥ ಸೇವೆಯ ಪ್ರತಿಬಿಂಬವಾಗಿದ್ದವು.
ಸ್ವಾಗತ ಭಾಷಣ ಮಾಡಿದ ಡಾ. ಶಿವಪ್ರಸಾದ್ ಶೆಟ್ಟಿ, ಮುಖ್ಯ ವೈದ್ಯಾಧಿಕಾರಿಗಳು, ಶಾಂತಿವನ, ಇವರು ಪ್ರಕೃತಿಚಿಕಿತ್ಸೆಯ ತತ್ರಗಳನ್ನು ಸರಳವಾಗಿ ವಿವರಿಸಿ, ನಮ್ಮ ದಿನನಿತ್ಯದ ಜೀವನದಲ್ಲಿ ನೈಸರ್ಗಿಕ ಜೀವನಶೈಲಿಯ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದರು.


ಡಾ. ಗೀತಾ ಬಿ. ಶೆಟ್ಟಿರವರು ಪ್ರಕೃತಿ ಚಿಕಿತ್ಸಾ ದಿನದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ‘ಸಾಧಕ ಎಂಬ ಪದವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಪರಿಕಲ್ಪನೆಯನ್ನು ರೂಪಿಸಿದ ಶ್ರೀ ರುದ್ರಪ್ಪ ಅವರ ಸ್ಮರಣೆ ಮಾಡಿಕೊಂಡು, ಸಮಗ್ರ ಜೀವನಶೈಲಿ ಮತ್ತು ಆತ್ಮಸಾಧನೆಯ ಅಗತ್ಯತೆಯನ್ನು ರೇಖಾಂಕಿಸಿದರು.
ನಂತರ ಸಾಧಕರ ಪರವಾಗಿ ಮಾತನಾಡಿದ ಕೆ.ಕೆ. ಕೆಂಚಣಗೌಡ ಅವರು ತಮ್ಮ ದೀರ್ಘಕಾಲದ ಶಾಂತಿವನ ಅನುಭವವನ್ನು ಹಂಚಿಕೊಂಡು, “ನಾನು ಇಲ್ಲಿ 36 ಬಾರಿ ಬಂದಿದ್ದೇನೆ, ನಾನು ಅಸ್ವಸ್ಥನಾಗಿದ್ದಾಗಲೂ, ಆರೋಗ್ಯವಾಗಿದ್ದಾಗಲೂ, ಸರ್ಜರಿ ಅದಾಗಲೂ, ಮೂಳೆ ಮುರಿದಾಗಲೂ – ಯಾವಾಗಲೂ ಶಾಂತಿವನವೇ ನನ್ನ ನೆಲೆ. ಇಲ್ಲಿ ದೊರೆಯುವ ಸರಳ ಸಲಹೆಗಳು ಮತ್ತು ಸಿಬ್ಬಂದಿಯ ನಗುಮುಖದ ಭರವಸೆ ರೋಗದ ಅರ್ಧ ಭಾಗವನ್ನು ಅಲ್ಲಿಯೇ ಗುಣಪಡಿಸುತ್ತದೆ” ಎಂದು ಹೃದಯಸ್ಪರ್ಶಿ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮ ವೇದಿಕೆಯಲ್ಲಿ ಡಾ. ಶಿವಪ್ರಸಾದ್ ಶೆಟ್ಟಿ (ಸಿಎಂಬ), ನಸೀಂ ಬಿ,ಐ, ಡಾ. ಗೀತಾ ಬಿ. ಶೆಟ್ಟಿ, ಡಾ. ಬಿಂದು (ಆರ್ಎಮ್ಒ), ಜಗನ್ನಾಥ್ (ಎಒ), ಸ್ವಸ್ಟಿಕ್ ಭಟ್ (ಮ್ಯಾನೇಜರ್) ಉಪಸ್ಥಿತರಿದ್ದರು.
ನಿಸರ್ಗ ಮತ್ತು ಸಂಸ್ಕಾರಗಳ ಸಂಯೋಜನೆಯ ಮೂಲಕ ಮಾನವ ಆರೋಗ್ಯವೃದ್ಧಿಯನ್ನು ಗುರಿಯಾಗಿಸಿಕೊಂಡಿರುವ ಶಾಂತಿವನದ ಈ ಕಾರ್ಯಕ್ರಮವು ನಿಸರ್ಗೋಪಚಾರದ ಶಕ್ತಿ ಮತ್ತು ಸೇವಾಮೂಲ್ಯದ ಸಂದೇಶವನ್ನು ಮತ್ತೆ ಒಮ್ಮೆ ಸಮಾಜಕ್ಕೆ ತಲುಪಿಸಿತು.
ಕಾರ್ಯಕ್ರಮದ ಕೊನೆಯಲ್ಲಿ ಡಾ. ಬಿಂದು ಸ್ನಾನಿಕ ವೈದ್ಯಕೀಯ ಅಧಿಕಾರಿ ಅವರು ಕೃತಜ್ಞತೆ ಸಲ್ಲಿಸಿದರು.









