






ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 17ರಂದು ಮಕ್ಕಳ ದಿನಾಚರಣೆಯನ್ನು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವು ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭವಾಯಿತು. ಸಹಶಿಕ್ಷಕಿ ಮಲ್ಲಿಕಾರವರು ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದರು.



ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಡು, ನೃತ್ಯ, ನಾಟಕದ ಮೂಲಕ ಮಕ್ಕಳನ್ನು ಮನರಂಜಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕ ಸ್ಕ್ಯಾನಿ ಗೋವಿಯಸ್ ರವರು ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೈಂಟ್ ಸೆಬಾಸ್ಟಿಯನ್ ಚರ್ಚ್ ಗರ್ಡಾಡಿಯ ಧರ್ಮಗುರು ಮ್ಯಾಕ್ಸಿಮ್ ಪೀಟರ್ ಪಿಂಟೋ ರವರು ಆಗಮಿಸಿದ್ದರು. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು ಮತ್ತು ಶಿಕ್ಷಕರನ್ನು ಗೌರವಿಸಬೇಕು ಎಂದು ಹೇಳಿ ಮಕ್ಕಳ ದಿನಾಚರಣೆಯ ಶುಭಾಶಯಗಳು ಕೋರಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ದೀಪಕ್ ಲಿಯೊ ಡೇಸರವರು ಸೇಕ್ರೆಡ್ ಹಾರ್ಟ್ ಚರ್ಚಿನ ಸಹಾಯಕ ಧರ್ಮ ಗುರು ಲ್ಯಾರಿ ಪಿಂಟೋ, ಪುಂಜಾಲಕಟ್ಟೆ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಚೇತನ, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ, ಮರಿಯ ಕೃಪ ಕಾನ್ವೆಂಟಿನಾ ನಿರ್ದೇಶಕಿ ಸಿ|ಹಿಲ್ಲಾ ಮಸ್ಕರೇನಸ್, ಹಾಗೂ ಶಿಕ್ಷಕರ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸ್ಟೆಲ್ಲಾ ರವರು ಸ್ವಾಗತಿಸಿ, ಶಿಕ್ಷಕ ವೃಂದದವರು ನಿರೂಪಿಸಿ, ಅನಿತಾ ಡೇಸ ರವರು ಧನ್ಯವಾದವನ್ನು ಸಮರ್ಪಿಸಿದರು.









