ಮಲವಂತಿಗೆ: ಕೃಷಿಕನನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳಿದ ಅರಣ್ಯ ಇಲಾಖೆ

0

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಅರಸಿನಮಕ್ಕಿ ನಿವಾಸಿ ಪಿ.ಟಿ. ಜೋಸೆಫ್ ಎಂಬವರನ್ನು ಅ.31ರಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲಬ್ಬಿಸಿದ್ದು ಅವರ ಕೃಷಿಯನ್ನು ಸಂಪೂರ್ಣವಾಗಿ ನಾಶ ಪಡಿಸಿ ಇಲ್ಲಿ ಅರಣ್ಯ ಗಿಡಗಳನ್ನು ನೆಟ್ಟಿದ್ದಾರೆ.

ಕಳೆದ ಐದು ದಶಕದಿಂದಲೂ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕು ಪತ್ರವನ್ನು ರದ್ದುಪಡಿಸಿದ ಅರಣ್ಯ ಇಲಾಖೆ ಇದೀಗ ಯಾವುದೇ ಕನಿಷ್ಟ ಪರಿಹಾರನ್ನೂ ನೀಡಿದೆ ಏಕಾಏಕಿ ಒಕ್ಕಲೆಬ್ಬಿಸಿ ಅವರ ಮನೆ ಹಾಗೂ ಕೃಷಿ ಭೂಮಿಯಿಂದ ಹೊರಗೆ ಕಳುಹಿಸಿದ್ದು ಬೇರೆ ಜಮೀನಾಗಲಿ ಮನೆಯಾಗಲಿ ಇಲ್ಲದ ಈ ಕುಟುಂಬ ಅಕ್ಷರಶ ಬೀದಿಪಾಲಾದಂತಾಗಿದೆ. ಇವರು ಕಳೆದ 50ವರ್ಷಗಳಿಂದ ಬದುಕಿದ್ದ ಮನೆಯನ್ನು ನಾಶಪಡಿಸಲಾಗಿದ್ದು ಸುಮಾರು ಎರಡು ಎಕ್ರೆ ಜಾಗದಲ್ಲಿದ್ದ ಫಲಕೊಡುವ ಅಡಿಕೆ ಮರಗಳನ್ನು ತೆಂಗಿನ ಮರಗಳನ್ನು ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದ್ದು ಅರಣ್ಯ ಇಲಾಖೆಯ ಬೋರ್ಡ್ ಅಳವಡಿಸಲಾಗಿದೆ.

1970 ರ ಸುಮಾರಿಗೆ ಪಿಟಿ ಜೋಸೆಫ್ ಅವರ ತಂದೆ ಇಲ್ಲಿ ಬಂದು ನೆಲೆಸಿದ್ದು 1997ರಲ್ಲಿ ಇವರಿಗೆ ರಾಜ್ಯ ಸರಕಾರ‌ ಅಕ್ರಮ ಸಕ್ರಮ ಕಾನೂನಿನ ಅಡಿಯಲ್ಲಿ 4.90 ಎಕ್ರೆ ಜಮೀನಿಗೆ ಹಕ್ಕು ಪತ್ರವನ್ನೂ ನೀಡಿತ್ತು. ಯಾವಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾಯಿತೋ ಅದರೊಂದಿಗೆ ಈ ಕುಟುಂಬಕ್ಕೆ ಸಂಕಷ್ಟಗಳೂ ಆರಂಭವಾಯಿತು. 2004ರಲ್ಲಿ ಇವರ ಹಕ್ಕು ಪತ್ರವನ್ನು ರದ್ದುಪಡಿಸಲಾಯಿತು. ಈ ವೇಳೆಗೆ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಭಾಗಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗಿದ್ದು ಸರಕಾರ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂಬ ಭರವಸೆಯನ್ನು ನೀಡಿತ್ತು. ಆದರೆ 2014ರಲ್ಲಿ ಅರಣ್ಯ ಇಲಾಖೆ ಜೋಸೆಫ್ ಅವರಿಗೆ ಮತ್ತೆ ನೋಟೀಸ್ ನೀಡಿ ಒಕ್ಕಲೇಳುವಂತೆ ಸೂಚಿಸಿತ್ತು. ಇದರ ವಿರುದ್ದ ಅವರು ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ್ದ ಮೇಲ್ಮನವಿಗಳು ತಿರಸ್ಕಾರಗೊಂಡಿತ್ತು. ಇವರಿಗೆ ಒಕ್ಕಲೇಳು ವಂತೆ ಅ.11ರಂದು ಅಂತಿಮ ನೋಟೀಸ್ ನೀಡಿ ಅ.30ರೊಳಗೆ ಸ್ಥಳ ಬಿಟ್ಟು ತೆರಳುವಂತೆ ಸೂಚಿಸಿತ್ತು. ಇದೀಗ ಅ 31ರಂದು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದಿಗೆ ಆಗಮಿಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠ ನೇತೃತ್ವದ ತಂಡ ಕೃಷಿಯನ್ನು ಹಾಗೂ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳು ಜೋಸೆಫ್ ಅವರ ಜಮೀನಿನಲ್ಲಿ ಇದ್ದ 400ಕ್ಕೂ ಅಧಿಕ ರಬ್ಬರ್ ಮರಗಳನ್ನು ಕಡಿದು ಜಾಗವನ್ನು ವಶಕ್ಕೆ ಪಡೆಸುಕೊಂಡಿದ್ದರು. ಈಜಾಗವನ್ನು ಇಲಾಖೆ ವಶಕ್ಕೆ ತೆಗೆದುಕೊಂಡು ಉಳಿದ ಜಾಗವನ್ನು ಕುಟುಂಬಕ್ಕೆ ನೀಡಿರುವುದಾಗಿ ಅಂದು ಅಧಿಕಾರಿಗಳು ತಿಳಿಸಿದ್ದರು ಆದರೆ ಈಗ ಅಂತಹ ಯಾವುದೇ ದಾಖಲೆಗಳು ಅರಣ್ಯ ಇಲಾಖೆಯ ಬಳಿ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.

ಇನ್ನೂ ಹಲವು ಕುಟುಂಬಗಳಿಗೆ ನೋಟೀಸ್: ಕುದುರೇಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿರುವ ಹಲವು ಕುಟುಂಬಗಳಿಗೆ ಈಗಾಗಲೇ ಜಮೀನು ಅತಿಕ್ರಮಣದ ಬಗ್ಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ನೋಟೀಸ್ ಜಾರಿಮಾಡಿರುವುದಾಗಿ ತಿಳಿದು ಬಂದಿದೆ. ಕುದುರೇಮುಖ ರಾಷ್ಟ್ರೀಯ ಉಧ್ಯಾನವನದೊಳಗೆ ವಾಸಿಸುತ್ತಿರುವ ಹಲವು ಕುಟುಂಬಗಳಿಗೆ ಸಮರ್ಕಕ ದಾಖಲೆಗಳಿಲ್ಲ ಅಂತಹ ಕುಟುಂಬಗಳಿಗೆ ನೋಟೀಸ್ ನೀಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ ಮುಂದಿನ ಹಂತವಾಗಿ ಇನ್ನಷ್ಟು ಒಕ್ಕಲೆಬ್ಬಿಸುವ ಪ್ರಕ್ರಿಯೆಗಳಿಗೆ ಅರಣ್ಯ ಇಲಾಖೆ ಮುಂದಾಗುವ ಸಾಧ್ಯತೆಯಿದೆ.

ಪರಿಹಾರವೇ ಇಲ್ಲ: ಆರಂಭದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರ ಬರುವ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿತ್ತು. ಜಮೀನಿನ ದಾಖಲೆಗಳು ಇರದಿದ್ದರೂ ಕೃಷಿಗೆ ಹಾಗೂ ಮನೆಗೆ ಪರಿಹಾರ ನೀಡಿ ಹೊರಬರುವ ಕುಟುಂಬಕ್ಕೆ ಸಹಾಯಧನವನ್ನೂ ನೀಡಲಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಪುನರ್ವಸತಿ ಪ್ಯಾಕೇಜ್ ಸ್ಥಗಿತಗೊಂಡಿದೆ. ಇದೀಗ ಯಾವ ಪರಿಹಾರವೂ ನೀಡದೆ ಒಕ್ಕಲೆಬ್ಬಿಸುವ ಕಾರ್ಯ ಆರಂಭಿಸಿದ್ದಾರೆ.

ಕಡಿದಾದ ರಸ್ತೆಯಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೂ ಸಂತ್ರಸ್ತ ಕುಟುಂಬ ಪರದಾಟವನಡೆಸ ಬೇಕಾಗಿ ಬಂತು ಕಜೆಕೆ ಶಾಲೆಯ ಸಮೀಪದಿಂದ ಎಳನೀರಿಗೆ ಹೋಗುವ ರಸ್ತೆಯಲ್ಲಿ ಮೂರು ಕಿ.ಮೀ‌ದೂರದಲ್ಲಿ ಸಂತ್ರಸ್ತ ಕುಟುಂಬದ ಮನೆಯಿದ್ದು ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ವಾಹನ ಸಂಚಾರವೇ ಕಷ್ಟಸಾಧ್ಯವಾದ ಈ ರಸ್ತೆಯಲ್ಲಿ ಮನೆಯ ಸಾಮಗ್ರಿಗಳು ದನಕರುಗಳನ್ನು ಕೃಷಿ ಉತ್ಪನ್ನಗಳನ್ನು ಕಜಕೆ ಶಾಲೆಯ ವರೆಗೆ ತರಲು ಸಾಕಷ್ಟು ಪರದಾಟ ನಡೆಸಬೇಕಾಗಿ ಬಂತು. ಸ್ಥಳೀಯ ನೀವಾಸಿಗಳೆಲ್ಲರೂ ಜೋಸೆಫ್ ನೆರವಿಗೆ ಬಂದು ಅಗತ್ಯ ವಸ್ತುಗಳನ್ನು ಹೊರ ತರಲು ನೆರವಾದರು. ಕೆಲವೆಡೆ ವಾಹನಗಳು ಹೂತು ಹೋಗಿ ಸಮಸ್ಯೆ ಎದುರಾಗಿತ್ತು. ಅರಣ್ಯ ಇಳಾಖೆಯ ಒಕಗಕಲೆಬ್ಬಿಸುವ ಕ್ರಮದ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಬೇರೆ ವ್ಯವಸ್ತೆಯೇ ಇಲ್ಲ: ನನಗೆ ಮೂರು ವರ್ಷ ಪ್ರಾಯದಲ್ಲಿ ಇಲ್ಲಿ ಬಂದು ನೆಲೆಸಿದ್ದೇವೆ ತಂದೆಯ ಹೆಸರಿನಲ್ಲಿ ಹಕ್ಕುಪತ್ರವೂ ಆಗಿತ್ತು ಈ ಕೃಷಿ ಭೂಮಿಯನ್ನೇ ನಂಬಿ ಬದುಕನ್ನು ನಡೆಸುತ್ತಿದ್ದೇವು ಇದೀಗ ಏಕಾಏಕಿ ಬೀದಿಗೆ ಬಿದ್ದಂತಾಗಿದೆ. ಪತ್ನಿ ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕು ಎಂದೇ ತಿಳಿದಿಲ್ಲ. ಬೇರೆ ಮನೆಯಾಗಲಿ ಜಮೀನಾಗಲಿ ಇಲ್ಲ.-ಜೋಸೆಫ್ ಪಿ.ಟಿ.

ಕನಿಷ್ಟ ಪರಿಹಾರವೂ ನೀಡದೆ ಒಕ್ಕಲೆಬ್ಬಿಸಿದ ಸರಕಾರ ನಡೆ ಅತ್ಯಂತ ಖಂಡನೀಯವಾಗಿದೆ. ಈ ಕುಟುಂಬಕ್ಕೆ ಇರಲು ಪರ್ಯಾಯ ವ್ಯವಸ್ಥೆ ಯನ್ನಾದರೂ ಮಾಡಿ ಎಬ್ಬಿಸುವ ಕಾರ್ಯ ಮಾಡಬೇಕಾಗಿತ್ತು. ಅಗತ್ಯ ವಸ್ತುಗಳನ್ನು ತೆಗೆಯಲು ಕನಿಷ್ಟ ಕೆಲ ದಿನಗಳ ಅವಕಾಶ ನೀಡಿ ಎಂದು ಕೇಳಿದ್ದರೆ ಅದನ್ನೂ ನೀಡದೆ ಒಕ್ಕಲೆಬ್ಬಿಸುವ ಕಾರ್ಯ ಮಾಡಿದ್ದಾರೆ ಸರಕಾರ ಅಧಿಕಾರಿಗಳು ಈ ಕುಟುಂಬಕ್ಕೆ ಕನಿಷ್ಟ ಪರಿಹಾರ ನೀಡಬೇಕು.-ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ

ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದೊಳಗಿಂದ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳುತ್ತಾ ಬಂದಿದ್ದ ರಾಜ್ಯ ಸರಕಾರ ಇದೀಗ ಬಲವಂತದ ಒಕ್ಕಲೆಬ್ಬಿಸುವಿಕೆಯ ಕಾರ್ಯಕ್ಕೆ ಮುಂದಾಗಿದೆ. ಸರಕಾರ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾದಾಗಲೇ ಮಲೆನಾಡಿನಲ್ಲಿ ನಕ್ಸಲ್ ಸಮಸ್ಯೆ ಆರಂಭವಾಗಿತ್ತು. ಇದೀಗ ನಕ್ಸಲ್ ಸಮಸ್ಯೆ ಪರಿಹಾರವಾದ ಬೆನ್ನಲ್ಲಿಯೇ ಸರಕಾರ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಜೋಸೆಫ್ ಅವರ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು.-ಸಾಮಾಜಿಕ ಹೋರಾಟಗಾರ ಶೇಖರ‌ಲಾಯಿಲ.

LEAVE A REPLY

Please enter your comment!
Please enter your name here