


ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಹಾಗೂ ವಖ್ಫ್ -ಮೈನಾರಿಟಿ ಇನ್ಫೋ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿಗೊಳಪಟ್ಟ ಎಲ್ಲಾ ಮೊಹಲ್ಲಾಗಳ ನಾಯಕರುಗಳಿಗೆ ‘ಉಮಿದ್ ಪೋರ್ಟಲ್’ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಗುರುವಾಯನಕೆರೆ ಸಮುದಾಯ ಭವನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ತಾಲೂಕಿನ ಹಲವು ಮಸೀದಿ, ಮೊಹಲ್ಲಾದ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದ.ಕ ಜಿಲ್ಲಾ ವಕ್ಫ್ ಕಾರ್ಯಾಲಯದ ಆಡಿಟರ್ ಅನ್ವರ್ ಮುಸ್ತಫ ಉಮಿದ್ ಪೋರ್ಟಲ್ ನಲ್ಲಿ ವಖ್ಫ್ ಆಸ್ತಿಗಳ ಮಾಹಿತಿ ತುಂಬುವುದರ ಬಗ್ಗೆ ವಿವರವಾಗಿ ವಿವರಿಸಿದರು. ವಖ್ಫ್-ಮೈನಾರಿ ಟಿ ಇನ್ಫೋ ಇದರ ಅಡ್ಮಿನ್ ಅಬ್ದುಲ್ ಖಾದರ್ ನಾವೂರು ಪ್ರಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು.



ವೇದಿಕೆಯಲ್ಲಿ ಮಾಜಿ ಸೈನಿಕ ಮುಹಮ್ಮದ್ ರಫಿ, ದ.ಕ ಜಿಲ್ಲಾ ವಖ್ಫ್ ಸಲಹಾ ಸಮಿತಿ ಮಾಜಿ ಸದಸ್ಯರಾದ ಸಿದ್ದೀಕ್ ಕಾಜೂರು ಹಾಗೂ ಸಾದಿಕ್ ಮಾಸ್ಟರ್ ಮಲೆಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಉಮೀದ್ ಪೋರ್ಟಲ್ ಮಾಹಿತಿ ತುಂಬುವ ಬಗ್ಗೆ ಆನ್ಲೈನ್ ಡೆಮೋ ತೋರಿಸಲಾಯಿತು. ಬೆಳ್ತಂಗಡಿ ಖಿಲ್ರ್ ಜುಮಾ ಮಸೀದಿ ಅಧ್ಯಕ್ಷ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಗುರುವಾಯನಕೆರೆ ಮಸೀದಿಯ ಕಾರ್ಯದರ್ಶಿ ಹನೀಫ್, ಜಮೀಯತುಲ್ ಫಲಾಹ್ ಬೆಳ್ತಂಗಡಿ ಪೂರ್ವ ಅಧ್ಯಕ್ಷ ಆಲಿಯಬ್ಬ ಪುಲಾಬೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡ ಕರೀಮ್ ಗೇರುಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಮುಂದಿನವಾರ ವಖ್ಫ್ ಇಲಾಖೆ ಹಾಗೂ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಮೊಹಲ್ಲಾಗಳ ವಖ್ಫ್ ವಿವರಗಳನ್ನು ಉಮಿದ್ ಪೋರ್ಟಲ್ ನಲ್ಲಿ ಸಲ್ಲಿಸಲು ಹೆಲ್ಪ್ ಡೆಸ್ಕ್ ತೆರೆದು ಸಹಕರಿಸಲು ತೀರ್ಮಾನಿಸಲಾಯಿತು. ಈ ಕುರಿತಂತೆ ಸ್ಥಳೀಯವಾಗಿ ಸೈಬರ್ ಸೆಂಟರ್ ನಡೆಸುತ್ತಿರುವ ಪ್ರಮುಖ ಕಂಪ್ಯೂಟರ್ ಆಪರೇಟರ್ ಗಳಿಗೆ ತರಬೇತಿ ನೀಡಲಾಯಿತು.










