




ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಗೊಲ್ಲ (ಯಾದವ) ಸಮಾಜ ಸೇವಾ ಸಂಘ, ಬೆಳ್ತಂಗಡಿ ವಲಯದ ಎರಡನೇ ವರ್ಷದ ವಾರ್ಷಿಕ ಮಹಾಸಭೆಯು ಅ.12ರಂದು ಕಾಶಿಪಟ್ಣ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ಅನ್ನಪೂರ್ಣ ಹಾಲ್‌ನಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಯು.ಎನ್. ಪ್ರಮೋದ್ ಕುಮಾರ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಕೃಷ್ಣ ಪರಮಾತ್ಮನು ಗೊಲ್ಲ ಜಾತಿಯಲ್ಲಿ ಹುಟ್ಟಿ ಲೋಕೋದಾರಕನಾದನು. ಸಂಘಟನೆ ಎನ್ನುವುದು ಶಕ್ತಿಯ ಮೂಲ, ಒಗ್ಗಟ್ಟಿನಿಂದ ಮಾತ್ರ ನಾವು ಮುಂದು ಬರಲು ಸಾಧ್ಯ. ಸಮಾಜದ ಪ್ರಗತಿಗೆ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಸಂಘದ ವಲಯಾಧ್ಯಕ್ಷ ಎಚ್.ರತ್ನಾಕರ್ ರಾವ್ ಅಧ್ಯಕ್ಷತೆ ವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮುಂದಿನ ಕಾರ್ಯಚಟುವಟಿಕೆಗಳ ಯೋಜನೆಗಳನ್ನು ಹಂಚಿಕೊಂಡರು.
ದ.ಕ. ಜಿಲ್ಲಾ ಗೊಲ್ಲ (ಯಾದವ) ಮಂಗಳೂರು ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ಆರ್. ಕುಮಾರಸ್ವಾಮಿ, ಉಪಾಧ್ಯಕ್ಷ ವಿಜಯಕುಮಾರ್ ಮೂಡಬಿದ್ರೆ, ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಅಲೆಮಾರಿ ಮತ್ತು ಅರೆ ಅಲಮಾರಿ ರಾಜ್ಯ ನಿರ್ದೇಶಕ ಅನಂತಕೃಷ್ಣ, ಮೂಡಬಿದ್ರೆ ಪುರಸಭೆ ಅಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದು ಸಂದರ್ಬೋಚಿತವಾಗಿಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಹಿರಿಯ ಪಶುವೈದ್ಯಾಧಿಕಾರಿ ಡಾ.ವಿನಯ್, ಮಂಗಳೂರಿನ ಉದ್ಯಮಿ ಗಂಗಾಧರ್ ಜಿ, ಬೆಂಗಳೂರಿನ ಉದ್ಯಮಿ ರಾಕೇಶ್ ರಾವ್, ಮೂಡುಬಿದ್ರೆ ಕೋಟೆಬಾಗಿಲು ಕೆ. ಗಿರೀಶ್, ಉದ್ಯಮಿ ರಮೇಶ್ ರಾವ್, ಕಾಶಿಪಟ್ಣ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ಮೊಕ್ತೇಸರ ವೆಂಕಟರಮಣ ಗೊಲ್ಲ, ಸಂಘದ ಗೌರವಾಧ್ಯಕ್ಷ ರಾಜೇಶ್ ರಾವ್ ಅಳದಂಗಡಿ, ಕಾರ್ಯದರ್ಶಿ ರಾಜೇಶ್ ಕಾಶಿಪಟ್ಣ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ: ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತೀಕ್ಷಾ, ವೈಷ್ಣವಿ, ನಿಸರ್ಗ ಸೇರಿದಂತೆ ಸಮಾಜದ ಕೀರ್ತಿಗೆ ಕಾರಣರಾದ ಮೂಡಬಿದ್ರೆ ಪುರಸಭೆ ಅಧ್ಯಕ್ಷೆ ಜಯಶ್ರೀ, ಮಂಗಳೂರಿನ ಹೆಡ್ ಕಾನ್ಸ್ಟೇಬಲ್ ಪ್ರಕಾಶ್, ಮೆಸ್ಕಾಂ ಮಡಂತ್ಯಾರಿನ ಜೆ.ಯು. ಪ್ರಮಿತ್, ಡಾ.ಪೂರ್ಣಶ್ರೀ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಆದಿಶಕ್ತಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿತು. ಬಳಿಕ ಪ್ರಸಾದ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಸ್ವಜಾತಿ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಗೊಲ್ಲ (ಯಾದವ) ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು, ಬೆಳ್ತಂಗಡಿ ವಲಯ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.
ಅಭಿಷೇಕ್ ಸ್ವಾಗತಿಸಿದರು, ಕಾರ್ಯದರ್ಶಿ ರಾಜೇಶ್ ಕಾಶಿಪಟ್ಣ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ವಿದ್ಯಾಲತಾ ಮತ್ತು ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು. ಸುಭಾಷ್ ಚಂದ್ರ ವಂದಿಸಿದರು.









