ಧರ್ಮಸ್ಥಳ: ಶ್ರದ್ಧಾ-ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಬೇಕು. ಆಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ ಎಂದು ಶೃಂಗೇರಿ ಪೀಠದ ಪೂಜ್ಯ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಅವರು ಅ.12ರಂದು ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 666ನೇ “ವಾತ್ಸಲ್ಯ ಮನೆ” ಹಸ್ತಾಂತರ ಮಾಡಿ ಫಲಾನುಭವಿಗಳಿಗೆ ಮಾಸಾಶನ ಮತ್ತು ಇತರ ಸವಲತ್ತುಗಳನ್ನು ವಿತರಿಸಿ ಆಶೀರ್ವಚನ ನೀಡಿದರು.

ಅದ್ವೈತ ತತ್ವ ಪ್ರಸಾರ ಮಾಡಿದ ಆದಿ ಶಂಕರಾಚಾರ್ಯರು ಇಡೀ ವಿಶ್ವಕ್ಕೆ ಸಾರ್ವಕಾಲಿಕವಾಗಿ ಅನ್ವಯವಾಗುವಂತಹ ಮೇಲಿನಂತೆ ಉಪದೇಶ ನೀಡಿದ್ದಾರೆ ಎಂದರು.ಮನುಷ್ಯರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು ಎಂದು ಸ್ವಾಮೀಜಿ ಹೇಳಿದರು.
೧. ಸತ್ಪುರುಷರು – ಸ್ವಾರ್ಥವಿಲ್ಲದೆ ಪರೋಪಕಾರ ಮಾಡುವವರು.
೨. ಸಾಮಾನ್ಯ ಜನರು – ಸ್ವಾರ್ಥಕ್ಕಾಗಿ ಪರೋಪಕಾರ ಮಾಡುವವರು.
೩. ತಮ್ಮ ಸ್ವಾರ್ಥ ಸಾಧನೆಗಾಗಿ ಇತರರಿಗೆ ತೊಂದರೆ ಮಾಡುವವರು – ಮಾನುಷ ರಾಕ್ಷಸರು.
೪. ಏನೂ ಪ್ರಯೋಜನವಿಲ್ಲದಿದ್ದರೂ ಇತರರಿಗೆ ತೊಂದರೆ ಕೊಡುವವರು.ಸಾಧ್ಯವಾದಷ್ಟು ಸಜ್ಜನರ ಸಹವಾಸ ಮಾಡಿ ಅವರ ಗುಣಗಳನ್ನು ಅನುಸರಿಸಿ ಎಲ್ಲರೂ ಪರೋಪಕಾರ ಮಾಡಬೇಕು. ಭಗವದ್ಗೀತೆ ಪಠಣದೊಂದಿಗೆ ಭಗವಂತನ ನಾಮಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಧರ್ಮಸ್ಥಳದಲ್ಲಿ ಚತುರ್ವಿದ ದಾನಪರಂಪರೆಯೊಂದಿಗೆ ಹೆಗ್ಗಡೆಯವರು ನಿರಂತರ ಮಾಡುತ್ತಿರುವ ಸಮಾಜ ಸೇವಾಕಾರ್ಯಗಳನ್ನು ಶ್ಲಾಘಿಸಿದ ಅವರು, ಒಳ್ಳೆಯ ಕೆಲಸಗಳನ್ನು ಮಾಡುವಾಗ ವಿಘ್ನಗಳು ಸಹಜವಾಗಿ ಬರುತ್ತವೆ. ಭಗವಂತನ ಸೇವೆಯೊಂದಿಗೆ ಭಕ್ತರು ಧರ್ಮಸ್ಥಳದ ಸೇವಾಕಾರ್ಯಗಳಿಗೂ ಸಕ್ರಿಯ ಸಹಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಕಷ್ಟದಲ್ಲಿರುವವರಿಗೆ “ವಾತ್ಸಲ್ಯ ಮನೆ” ನೀಡುವ ಕಾಯಕ ಅತ್ಯಂತ ಪುಣ್ಯದಾಯಕ ಸೇವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಧರ್ಮಸ್ಥಳ ಕ್ಷೇತ್ರವು ಅತಿಶಯ ಕ್ಷೇತ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಸ್ವಾಮೀಜಿ ಹಾರೈಸಿದರು.ತಮ್ಮ ಎರಡು ತಿಂಗಳ ಪ್ರವಾಸವನ್ನು ಧರ್ಮಸ್ಥಳದಿಂದ ಆರಂಭಿಸಿರುವುದಾಗಿ ಅವರು ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಗುರುಗಳು ಧರ್ಮಸ್ಥಳಕ್ಕೆ ಕೊಡುಗೆಯಾಗಿ ನೀಡಿದ ಕಾರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶೃಂಗೇರಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿ ಪೂಜ್ಯರ ಆಶೀರ್ವಾದ ಮತ್ತು ಮಾರ್ಗದರ್ಶನ ಇರಲಿ ಎಂದು ಕೋರಿದರು.
ಮೈಸೂರಿನಲ್ಲಿ ವಾತ್ಸಲ್ಯ ಮನೆ ನೋಡಿ ತಾವು ತುಂಬಾ ಸಂತೋಷಪಟ್ಟಿರುವುದಾಗಿ ಹೆಗ್ಗಡೆಯವರು ತಿಳಿಸಿದರು. ಸ್ವಾಮೀಜಿಯವರು ಸಾನ್ನಿಧ್ಯ ಸರತಿ ಸಾಲಿನ ವ್ಯಸಸ್ಥೆ ಹಾಗೂ ವಸ್ತುಸಂಗ್ರಾಹಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ರಾಜ್ಯದಲ್ಲಿ ಐವತ್ತಮೂರು ಲಕ್ಷ ಕುಟುಂಬಗಳು ಫಲಾನುಭವಿಗಳಾಗಿದ್ದು ಆರ್ಥಿಕ ಸಬಲೀಕರಣದೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.

ಇಪ್ಪತ್ತು ಸಾವಿರ ವಾತ್ಸಲ್ಯ ಫಲಾನುಭವಿಗಳಿದ್ದು 2094 ಮಂದಿಗೆ ಪೌಷ್ಠಿಕ ಆಹಾರ ಕಿಟ್ ವಿತರಿಸಲಾಗಿದೆ. 18,500 ಮಂದಿ ಅಸಹಾಯಕರಿಗೆ ವಾತ್ಸಲ್ಯ ಕಿಟ್ ಮೂಲಕ ಪಾತ್ರೆಗಳು, ಹಾಸಿಗೆ, ಹೊದಿಕೆ ಮೊದಲಾದ ಮೂಲಭುತ ಸೌಕರ್ಯಗಳನ್ನು ಒದಗಿಸಲಾಗಿದೆ.ಒಂದು ಸಾವಿರ ವಾತ್ಸಲ್ಯ ಮನೆಗಳನ್ನು ನಿರ್ಗತಿಕರಿಗೆ ನೀಡಲು ಉದ್ದೇಶಿಸಿದ್ದು 781 ವಾತ್ಸಲ್ಯ ಮನೆಗಳಿಗೆ ಈಗಾಗಲೇ ಹತ್ತು ಕೋಟಿ ಎಂಬತ್ತೈದು ಲಕ್ಷದ ಹದಿನಾಲ್ಕು ಸಾವಿರ ರೂ. ವಿನಿಯೋಗಿಸಲಾಗಿದೆ ಎಂದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸೋನಿಯಾ ಯಶೋವರ್ಮ, ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಮಂಡಳಿ ಸದಸ್ಯ ಶ್ಯಾಮ್ ಭಟ್ ಕೆ. ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಮ್. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಧರ ಭಟ್ ಸ್ವಾಗತಿಸಿದರು. ಪೂಜಾ ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೆಜಸ್ ಧನ್ಯವಾದವಿತ್ತರು.