ಉಪ್ಪಿನಂಗಡಿ 108 ಆಂಬ್ಯುಲೆನ್ಸ್ ಗೆ ತುಕ್ಕು! ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಶೆಡ್‌ನಲ್ಲಿ ಪಾರ್ಕಿಂಗ್!

0

ಕೊಕ್ಕಡ: ಜನರ ತುರ್ತು ಆರೋಗ್ಯ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಸರಕಾರವೇ ಕೋಟ್ಯಂತರ ರೂ. ವೆಚ್ಚದಲ್ಲಿ ಪ್ರಾರಂಭಿಸಿದ 108 ಆಂಬ್ಯುಲೆನ್ಸ್ ವಾಹನ ಹಲವೆಡೆ ತುಕ್ಕು ಹಿಡಿಯುತ್ತಿದೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಇದೇ ಸಮಸ್ಯೆ. ಇಲ್ಲಿನ ಆಂಬ್ಯುಲೆನ್ಸ್ ಕಳೆದೊಂದು ತಿಂಗಳಿನಿಂದ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಬದಿ ಶೆಡ್‌ ನಲ್ಲಿ ತುಕ್ಕು ಹಿಡಿಯುತ್ತಿದೆ!

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉಪ್ಪಿನಂಗಡಿ ನಗರ ಪ್ರದೇಶಕ್ಕೆ ಸರಕಾರ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಿದೆ. ಆಸ್ಪತ್ರೆಯ ಕಟ್ಟಡ, ಬೃಹತ್ ಕೊಠಡಿಗಳು ಚೆನ್ನಾಗಿವೆ. ಆದರೆ ಜನರಿಗೆ ಬೇಕಾದ ಸೌಲಭ್ಯಗಳ ಕೊರತೆ ಮಾತ್ರ ಎಲ್ಲೆಡೆ ಗೋಚರಿಸುತ್ತಿದೆ.

ಆಸತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ತಮ್ಮ ಶ್ರಮದಿಂದ ಮೂಲಸೌಕರ್ಯಗಳ ಅಭಾವದಲ್ಲಿಯೂ ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಆಂಬ್ಯುಲೆನ್ಸ್ ಸೇವೆಯೇ ಸ್ಥಗಿತ ವಾಗಿರುವುದು ದೊಡ್ಡ ಪ್ರಶ್ನೆಯಾಗಿದೆ.

ಸರಕಾರ ಪ್ರಾರಂಭಿಸಿದ 108 ಆಂಬ್ಯುಲೆನ್ಸ್ ಯೋಜನೆಯ ಉದ್ದೇಶ ಯಾರೇ ಆಗಲಿ, ಯಾವಾಗಲಾದರೂ ತುರ್ತು ಪರಿಸ್ಥಿತಿ ಎದುರಿಸಿದಾಗ ತಕ್ಷಣ ವಾಹನ ಅವರ ಮನೆ ಬಾಗಿಲಿಗೆ ಬರುವಂತಾಗಬೇಕು. ಆದರೆ ಉಪ್ಪಿನಂಗಡಿಯಲ್ಲಿ ಸ್ಥಿತಿ ಬೇರೆಯೇ ಆಗಿದೆ. ಜನರ ಉಪಯೋಗಕ್ಕಾಗಿ ನೀಡಲಾದ ಲಕ್ಷಾಂತರ ಮೌಲ್ಯದ ಆಂಬ್ಯುಲೆನ್ಸ್ ಇಂದು ಬಳಕೆಯಾಗದೆ ನಿಂತಿದೆ. ಅದೇ ವಾಹನ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಬದಿಯ ಶೆಡ್‌ ನಲ್ಲಿ ತುಕ್ಕು ಹಿಡಿಯುತ್ತಾ ನಿಂತಿದೆ.

ಜನರ ಜೀವ ಉಳಿಸಲು ನೀಡಿದ ಈ ವಾಹನ ಸೇವೆ ನಿಲ್ಲಿಸುವುದು ಸರಿಯೇ ಎಂದು ಜನಸಾಮಾನ್ಯರು ಪ್ರಶ್ನಿಸು ತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು, 108 ಸೇವೆ ನಿರ್ವಹಿಸುತ್ತಿರುವ ಜಿವಿಕೆ ಸಂಸ್ಥೆಯಿಂದ ಯಾವುದೇ ಸ್ಪಷ್ಟನೆ ಇಲ್ಲ.

ಖಾಸಗಿ ಆಂಬ್ಯುಲೆನ್ಸ್ ದುಬಾರಿ: ಉಪ್ಪಿನಂಗಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಆಂಬ್ಯುಲೆನ್ಸ್ ಸೇವೆ ತೀರಾ ವಿರಳ. ಕೆಲವೆಡೆ ಲಭ್ಯವಿದ್ದರೂ ದುಬಾರಿ. ಬಡವರಿಗಾಗಿ ಸರಕಾರ ನೀಡಿದ 108 ವಾಹನವೇ ಏಕೈಕ ಭರವಸೆಯಾಗಿತ್ತು. ಈಗ ಅದು ನಿಂತಿರುವುದರಿಂದ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ಜನರು ಕಷ್ಟಪಡುತ್ತಿದ್ದಾರೆ.

ಉಪ್ಪಿನಂಗಡಿ ಆಂಬ್ಯುಲೆನ್ಸ್‌ನ ಕಥೆ ಕೇವಲ ಒಂದು ಘಟನೆಯಲ್ಲ. ಇದು ಸರಕಾರದ ಸೇವಾ ವ್ಯವಸ್ಥೆಯ ಸ್ಥಗಿತದ ಸಂಕೇತ. ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ವಾಹನವನ್ನು ಪುನಃ ಸೇವೆಗೆ ಲಭ್ಯವಾಗಿಸಬೇಕು.

ಉಪ್ಪಿನಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಂಬ್ಯುಲೆನ್ಸ್ ಮ್ಯಾನ್ ಪವರ್ ಇಲ್ಲದ ಕಾರಣ ಬಳಕೆಯಾಗುತ್ತಿಲ್ಲ. 108 ಆಂಬ್ಯುಲೆನ್ಸ್ ವ್ಯವಸ್ಥೆಯಲ್ಲಿ ಶೇ.50ರಷ್ಟು ಅಧಿಕಾರ ಆರೋಗ್ಯ ಇಲಾಖೆಗೆ ಹಾಗೂ ಶೇ.50ರಷ್ಟು ಜಿವಿಕೆ ಸಂಸ್ಥೆಗೆ ಇದೆ. ಹೀಗಾಗಿ ಪೂರ್ಣ ಪ್ರಮಾಣದ ಅಧಿಕಾರ ಯಾರಿಗೂ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 108 ಜಿವಿಕೆ ಸಂಯೋಜಕ ಮುನಿಷ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here