ಬೆಳ್ತಂಗಡಿ: ಭೂಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನನ್ನು ಬೆಳ್ತಂಗಡಿಯಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು. ತಾಲೂಕಿನ ಲಾಯಿಲ ಗ್ರಾಮದ ವಿವೇಕಾನಂದ ನಗರ ನಿವಾಸಿ ಕೃಷ್ಣಪ್ಪ ಗೌಡ ಮತ್ತು ವಾರಿಜಾ ದಂಪತಿಗಳ ಪುತ್ರ ಅಶೋಕ್ ಕುಮಾರ್ ಭಾರತೀಯ ಸೇನೆಯ ಭೂಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಅ. 3ರಂದು ತಾಯ್ನಾಡಿಗೆ ಆಗಮಿಸಿದರು. ಇವರು ಪಟ್ನಾಕೋಟ್ ಕೊಲ್ಕತ್ತಾ ಅಸ್ಸಾಂ, ರಾಜಸ್ಥಾನ, ಬೆಂಗಳೂರು, ಜಮ್ಮು ಮತ್ತು ಪುಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ನಿ ಶಶಿಕಲಾ ಮಕ್ಕಳಾದ ಸಾಕ್ಷಿ ಮತ್ತು ಸಾತ್ವಿಕ್ ಇವರೊಂದಿಗೆ ಸುಂದರ ಸಂಸಾರವನ್ನು ನಡೆಸುತ್ತಿದ್ದರು.

ಇವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ತೆರೆದ ವಾಹನದ ತುಂಬಾ ತಿರಂಗಾ ಹೂಗಳ ಅಲಂಕಾರ ಮಾಡಲಾಗಿತ್ತು. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಉಜಿರೆ , ಬೆಳ್ತಂಗಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಭವ್ಯವಾಗಿ ಸ್ವಾಗತಿಸಿದರು. ದಾರಿಯುದ್ದಕ್ಕೂ ದೇಶಭಕ್ತಿಗೀತೆಗಳನ್ನು ಮೊಳಗಿಸಲಾಯಿತು.


ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸೈನಿಕರು ಪಂಚಾಯತ್ ಸದಸ್ಯರು ಹಾಗೂ ಸಾರ್ವಜನಿಕರು ಹೂವಿನಮಾಲೆ ಹಾಕಿ ಹಸ್ತಲಾಘವ ಮಾಡಿ ಶುಭಾಶಯ ಕೋರಿದರು. ತಾಯ್ನಾಡಿಗೆ ಸೇವೆ ಸಲ್ಲಿಸುವುದು ಎಲ್ಲರಿಗೂ ಒಲಿದುಬರುವುದಿಲ್ಲಾ, ಒಲಿದು ಬಂದವರೇ ಪುಣ್ಯವಂತರು ಎಂದು ಮಾಜಿ ಸೈನಿಕರು ಅಭಿಪ್ರಾಯಪಟ್ಟರು.