ಬೆಳ್ತಂಗಡಿ: ಸ.ಪ್ರ.ದ. ಕಾಲೇಜಿನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನವಯುವ ಹೆಸರಿನಲ್ಲಿ ಸ್ವಾಗತ ಕಾರ್ಯಕ್ರಮವನ್ನು ಸೆ.30ರಂದು ಆಯೋಜಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ವಿ. ಅವರು ಹಿಂದಿನ ಕಾಲದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವುದು ತುಂಬಾ ಕಷ್ಟವಾಗಿತ್ತು, ಆದರೆ ಇಂದು ನೀವುಗಳು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಅದರ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗೂ ಕಾಲೇಜಿನಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ಪದ್ಮನಾಭ ಕೆ. ಅವರು ಮಾತನಾಡಿ ವಿದ್ಯಾರ್ಥಿಗಳು ನಿಮಗೆ ಸಿಕ್ಕ ಅವಕಾಶಗಳನ್ನು ಬಿಡದೆ ಅವಕಾಶಗಳ ಬೆನ್ನು ಹತ್ತಬೇಕು ಎಂದು ತಿಳಿಸಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ರವಿ ಎಂ. ಎನ್. ಅವರು ಮಾತನಾಡಿ ಪಠ್ಯಕ್ರಮದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಸಿಗುತ್ತದೆ ಎಂದು ತಿಳಿಸಿದರು.

ನಿರ್ವಹಣಾ ವಿಭಾಗದ ಮುಖ್ಯಸ್ಥೆ ಹಾಗೂ ಉದ್ಯೋಗ ಮಾಹಿತಿ ಕೇಂದ್ರದ ಸಂಚಾಲಕಿ ಪ್ರೊ. ರಶ್ಮಿ ಅವರು ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೌಶಲ್ಯಗಳನ್ನು ಬಳಸಿಕೊಂಡು ನಮ್ಮ ಶಿಕ್ಷಣ ಮುಗಿಯುವ ಹಂತದಲ್ಲಿ ಉದ್ಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಮಾರುತಿ ಜಿ. ಅವರು ನಾವೆಲ್ಲರೂ ನಮ್ಮ ತರಗತಿಗಳ ಜೊತೆಗೆ ಕಾಲೇಜಿನಲ್ಲಿ ದೊರೆಯುವ ಹಾಗೂ ಮೊಬೈಲ್ ನಲ್ಲಿ ಸಿಗುವಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕೆಂದು ತಿಳಿಸಿದರು.
ಸ್ನಾತಕೋತ್ತರ ವಿಭಾಗದ ಪ್ರತಿನಿಧಿಗಳಾದ ನಿತಿನ್ ಶೆಟ್ಟಿ ಹಾಗೂ ವೈಷ್ಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ಣಿಮಾ ಹಾಗೂ ವನಿತಾ ಪ್ರಾರ್ಥಿಸಿ, ಅಂತಿಮ ಎಂ.ಕಾಂ.ನ ವಿದ್ಯಾರ್ಥಿನಿ ಅಂಕಿತ ಸ್ವಾಗತಿಸಿದರು. ವಾಣಿ ಅವರು ಕಾರ್ಯಕ್ರಮ ನಿರೂಪಿಸಿದರು. ಚೈತ್ರ ಅವರು ವಂದನಾರ್ಪಣೆಗೈದರು.