ಕೊಕ್ಕಡ: ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.19ರಂದು ಸಂಘದ ಆವರಣದಲ್ಲಿ ನಡೆಯಿತು. ಸಂಘವು ಒಟ್ಟು 180 ಸದಸ್ಯರನ್ನು ಹೊಂದಿದ್ದು ಕಳೆದ ಸಾಲಿನಲ್ಲಿ 69,67,535 ಮೌಲ್ಯದ1,91,973 ಹಾಲನ್ನು ಸಂಗ್ರಹಣೆ ಮಾಡಿದೆ. ಈ ಅವಧಿಯಲ್ಲಿ ಸಂಘವು, 1,26,535.01 ನಿವ್ವಳ ಲಾಭ ಗಳಿಸಿದೆ.
ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷೆ ಶ್ವೇತಾ ಎಚ್. ಕೆ. ಅವರು ಮಾತನಾಡಿ ಸಂಘವು ಆರಂಭಗೊಂಡು ಹತ್ತು ವರ್ಷಗಳಾಯಿತು. ದಿನವೊಂದರ 50 ಲೀ ಹಾಲಿನಿಂದ ಆರಂಭಗೊಂಡ ಸಂಘವು 850 ಲೀ ಹಾಲನ್ನು ಸಂಗ್ರಹಿಸುತ್ತಿದೆ. ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು ಲಾಭದಾಯಕವಾಗಿ ನಡೆಯುತ್ತಿದೆ. ಒಕ್ಕೂಟದ ಅಧಿಕಾರಿಗಳು, ಸಂಘದ ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಹಾಗೂ ಊರವರ ಸಹಕಾರ ಸಂಘದ ಬೆಳವಣಿಗೆಗೆ ಸಾಧ್ಯವಾಗಿದೆ ಎಂದರು.
ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪ್ರಸಾದ್ ಕಾಮತ್ ಮಾತನಾಡಿ ಪಶುಗಳ ಆರೋಗ್ಯ, ಪಶು ಆಹಾರದ ಸದ್ಬಳಕೆ, ಹಾಗೂ ಒಕ್ಕೂಟದಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ರೈತರು ಪಶುಪಾಲನೆಯತ್ತ ಮನಮಾಡಿ ಹಾಲಿನ ಪೂರೈಕೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಹೇಮಾವತಿ, ನಿರ್ದೇಶಕರಾದ ದಿವ್ಯ, ಜಯಂತಿ, ಸುಂದರಿ ಎ., ಅಕ್ಷತಾ, ಚಂದ್ರಾವತಿ, ಕುಸುಮ, ಶೀಲ, ರೋಸ್ಲಿನ್, ಶೋಭ ಉಪಸ್ಥಿತರಿದ್ದರು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಸದಸ್ಯರನ್ನು ಹಾಗೂ ವರ್ಷಪೂರ್ತಿ ಹಾಲು ಹಾಕಿದ ಸದಸ್ಯರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಸಂಘದ ಅಭಿವೃದ್ಧಿಗೆ ಸಹಕರಿಸಿದ ಹರಿಪ್ರಸಾದ್ ಕೆದಿಲಾಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆ ಅಶ್ವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಧ್ಯಾ ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ವೇದಾವತಿ ಸಹಕರಿಸಿದರು. ನಿರ್ದೇಶಕಿ ರೋಸ್ಟಿನ್ ವಂದಿಸಿದರು.