ಸೌತಡ್ಕ ದೇವಸ್ಥಾನದ ಸೇವಾ ದರ ಪರಿಷ್ಕರಣೆ-ಎಂಟು ವರ್ಷದ ಬಳಿಕ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಪಾತ್ರ ಇಲ್ಲ: ಸ್ಪಷ್ಟನೆ ನೀಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ

0

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಸೇವಾ ದರ ಪರಿಷ್ಕರಣೆಯು ಎಂಟು ವರ್ಷದ ಬಳಿಕ ಅಲ್ಪ ಪ್ರಮಾಣದಲ್ಲಿ ಕೆಲವು ಸೇವೆಗಳಿಗೆ ಸೀಮಿತಗೊಳಿಸಿ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಹೇಳಿದ್ದಾರೆ.

ಈ ಹಿಂದಿನ ವ್ಯವಸ್ಥಾಪನ ಸಮಿತಿಯವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿರುವ ದಿನಾಂಕ 2024ರ ಜನವರಿ 1ರ  ಸಭೆಯ ನಿರ್ಣಯದಂತೆ, ಕೆಲವು ಸೇವಾ ದರ ಪಟ್ಟಿಯನ್ನು ಅಲ್ಪಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಅವಲಕ್ಕಿ ಪಂಚ ಕಜ್ಜಾಯ 70 ರೂಪಾಯಿಯಿಂದ 80ಕ್ಕೆ, ಕಡ್ಲೆ ಪಂಚ ಕಜ್ಜಾಯ 20ರಿಂದ 30 ರೂಪಾಯಿಗೆ, ಅಪ್ಪ ಪ್ರಸಾದ 30ರಿಂದ 40 ರೂಪಾಯಿಗೆ, ಲಾಡು ಪ್ರಸಾದ 20ರಿಂದ 30 ರೂಪಾಯಿವರೆಗೆ, ಘನ ವಾಹನ ಪೂಜೆ 75ರಿಂದ 100 ರೂಪಾಯಿ, ಲಘು ವಾಹನ 100ರಿಂದ 200, ಅಷ್ಟೋತ್ತರ ಅರ್ಚನೆ ರೂ.40 ರಿಂದ ರೂ.50 ವರೆಗೆ ಹೆಚ್ಚಿಸಲಾಗಿದೆ.

ಕ್ಷೇತ್ರದಲ್ಲಿ ದೇವರಿಗೆ ನಡೆಯುವ 20 ಸೇವೆಗಳಲ್ಲಿ 8 ಸೇವೆಗಳಿಗೆ ಎಂಟು ವರ್ಷದ ಬಳಿಕ ದರ ಪರಿಷ್ಕರಣೆ ಮಾಡಲಾಗಿದೆ. ಹಾಗಾಗಿ ಇದರಲ್ಲಿ ಸರ್ಕಾರದ ಪಾತ್ರ ಇಲ್ಲ ಎಂದವರು ವಿವರಣೆ ನೀಡಿದ್ದಾರೆ.  

ಆಗಮ ಪಂಡಿತರು ದೇವಳಕ್ಕೆ ಖುದ್ದು ಭೇಟಿ ನೀಡಿ, ಸೇವಾರ್ಥ ಪಟ್ಟಿಯನ್ನು ಕೂಲಕುಶವಾಗಿ ಪರಿಶೀಲಿಸಿ, ಕೆಲವು ಮಾರ್ಪಾಡುಗಳನ್ನು ಮಾಡಿರುವುದರಿಂದ 8 ಸೇವೆಗಳ ದರ ಪರಿಷ್ಕರಣೆಗಳನ್ನು ಪ್ರಸ್ತುತ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಂಗೀಕರಿಸಿದೆ.
ದರ ಪರಿಷ್ಕರಣೆಯಾಗಿರುವ ಸೇವೆಗಳ ಸಾಮಾಗ್ರಿಗಳ ವೆಚ್ಚಗಳು ಏರಿಕೆ ಆಗಿರುವುದರಿಂದ ಅನಿವಾರ್ಯವಾಗಿ ಅಲ್ಪ ಪ್ರಮಾಣದಲ್ಲಿ ಸೇವ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಶಬರಾಯ ಸ್ಪಷ್ಟನೆ ನೀಡಿದ್ದಾರೆ.
 

LEAVE A REPLY

Please enter your comment!
Please enter your name here