ಬೆಳ್ತಂಗಡಿ: ಯುನೈಟೆಡ್ ಎಂಪವರ್ ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿಯಿಂದ ಸೆ. 12ರಂದು ಮಂಗಳೂರು ಇಂಡಿಯಾನಾ ಕನ್ವೆನ್ಸನ್ ಸೆಂಟರ್ ನಲ್ಲಿ ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಬಲಪಡಿಸುವ ಉದ್ದೇಶದೊಂದಿಗೆ ಯುಇಎ 21 ವಲಯಗಳಾದ ಮಂಗಳೂರು, ಪಡುಬಿದ್ರಿ, ಉಳ್ಳಾಲ, ಬಂಟ್ವಾಳ, ವಿಟ್ಲ, ಮತ್ತೂರು, ಬೆಳ್ತಂಗಡಿ ಕೈಕಂಬ-ಬಜ್ಜೆ, ಮೂಡಬಿದ್ರಿ-ಕಾರ್ಕಳ, ಸುಳ್ಳ, ಸುರತ್ಕಲ್-ಜೋಕಟ್ಟೆ, ಕಾಪು, ಉಪ್ಪಿನಂಗಡಿ, ಫರಂಗಿಪೇಟೆ, ಶಿರೂರ್ ಮತ್ತು ಕುಂದಾಪುರ ವಲಯ ವ್ಯಾಪ್ತಿಯಲ್ಲಿ ಬರುವ ಯುವಕರನ್ನು ಒಟ್ಟುಗೂಡಿಸಿ “ಕಮ್ಯೂನಿಟಿ ಯೂತ್ ಲೀಡರ್ ಮೀಟ್ 2025″ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಸಂಜೆ 7ಗಂಟೆಯಿಂದ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ (UEA) ಕ್ರೀಡೆಗಳ ಮೂಲಕ ಸಮುದಾಯದ ಸಬಲೀಕರಣ ಮತ್ತು ಅಭಿವೃದ್ಧಿಯತ್ತ ಕೊಂಡುಹೋಗುವ ಸಂಸ್ಥೆಯಾಗಿದೆ. ಎಲ್ಲಾ ವಿಧದ ಕ್ರೀಡಾಪಟುಗಳನ್ನು ಸಿದ್ಧಪಡಿಸಿ, ಸ್ಪರ್ಧಾತ್ಮಕ ಮಟ್ಟದಲ್ಲಿ ಭಾಗವಹಿಸಲು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಭಾರತೀಯ ಸೊಸೈಟಿ ಕಾಯ್ದೆಯಡಿ ನೋಂದಾಯಿತವಾದ ಈ ಸಂಸ್ಥೆ ಕರ್ನಾಟಕದಲ್ಲಿ ಕ್ರೀಡೆ ಮತ್ತು ಆಟಗಳನ್ನು ಬೆಳೆಸಲು ಶ್ರಮಿಸುತ್ತಿದೆ.
ಈ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಲು ಬದ್ಧವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 7000ಕ್ಕೂ ಅಧಿಕ ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಯುವ ಪೀಳಿಗೆಯನ್ನು ಒಗ್ಗೂಡಿಸಲು, ಸವಾಲು ನೀಡಲು ಮತ್ತು ಪ್ರೇರೇಪಿಸಲು ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಕ್ರೀಡಾಪಟುಗಳ ಜೀವನದಲ್ಲಿ ಕಾರ್ಯಬದ್ಧ ಒಕ್ಕೂಟವನ್ನು ನಿರ್ಮಿಸಿ, ಬೆಳೆಸಿ, ಮುನ್ನಡೆಸುವ ಗುರಿ ಇಟ್ಟುಕೊಂಡಿದೆ. UEA ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಚೆಸ್, ಕ್ಯಾರಂ, ಟೇಬಲ್ ಟೆನ್ನಿಸ್, ಖೋ-ಖೋ, ಪ್ರೋ ಬಾಲ್, ಕುಸ್ತಿ, ಕರಾಟೆ, ಜುಡೋ, ಮುಂಯ್ ತಾಯಿ, ಫೆನ್ಸಿಂಗ್, ಓಟ, ಜಂಪಿಂಗ್, ಪ್ರೊ ಹಾಗೂ ಸ್ಟೇಟಿಂಗ್ ಮುಂತಾದ ವಿವಿಧ ಕ್ರೀಡೆಗಳನ್ನು ಉತ್ತೇಜಿಸುತ್ತಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.