
ಉಜಿರೆ: ಒಂದು ವಿಷಯದ ಕುರಿತು ಬರೆಯಬೇಕಾದರೆ ಭಾಷಾ ಜ್ಞಾನ ಅತಿಮುಖ್ಯ.ಭಾಷಾ ಬಳಕೆಯಲ್ಲಿ ಪ್ರಾವಿಣ್ಯತೆ ಪಡೆದರೆ ಬರವಣಿಗೆಗೆ ಮತ್ತಷ್ಟು ತೂಕ ಬರುತ್ತದೆ. ಆದ್ದರಿಂದ ಬರವಣಿಗೆ ಪ್ರಕ್ರಿಯೆಯಲ್ಲಿ ಭಾಷೆಯನ್ನು ದುಡಿಸಿಕೊಳ್ಳಬೇಕು ಎಂದು ಮಂಗಳೂರಿನ ಕಾವೂರು ಬಿ.ಜಿ.ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಮಣ್ಯ ಸಿ. ಹೇಳಿದರು.
ಶ್ರೀ ಧ.ಮಂ. ಕಾಲೇಜಿನಲ್ಲಿ ಇತಿಹಾಸ ವಿಭಾಗವು ಆ. 20ರಂದು ಆಯೋಜಿಸಿದ್ದ “ಇತಿಹಾಸದ ಕುರಿತು ಲೇಖನ ಬರವಣಿಗೆ” ಎಂಬ ವಿಷಯದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮನುಷ್ಯನ ಭಾವನೆಗಳ ಹಂಚಿಕೆಗೆ ಬರವಣಿಗೆ ಒಂದು ಮುಕ್ತ ವೇದಿಕೆಯಾಗಿದೆ. ನಮ್ಮ ಆಲೋಚನೆಗಳು, ನಿಲುವುಗಳನ್ನು ಬರವಣಿಗೆಯ ಮೂಲಕ ಸರಳವಾಗಿ ನಾವು ದಾಖಲಿಸಬಹುದು. ಬರವಣಿಗೆಗೆ ಆಯ್ದುಕೊಳ್ಳುವ ವಿಷಯದ ಕುರಿತು ಸಂಪೂರ್ಣವಾಗಿ ನಮಗೆ ತಿಳಿದಿರಬೇಕು.ನಮ್ಮ ಸುತ್ತಮುತ್ತ ಆಸಕ್ತಿದಾಯಕವಾದ ಸಾಕಷ್ಟು ವಿಚಾರಗಳಿವೆ.ಅವುಗಳನ್ನು ಗುರುತಿಸಿ ಬರವಣಿಗೆ ಪ್ರಾರಂಭಿಸಿ ಎಂದು ಸಲಹೆ ನೀಡಿದರು.
ಬರೆಯುವ ವಿಷಯದ ಬಗ್ಗೆ ಅಳವಾದ ಅಧ್ಯಯನ ನಡೆಸಿ ತಿಳುವಳಿಕೆ ಮೈಗೂಡಿಸಿಕೊಂಡಾಗ ನಮ್ಮ ಬರವಣಿಗೆ ಮತ್ತಷ್ಟು ಬಲವಾಗುತ್ತದೆ. ಬರವಣಿಗೆ ಮಾಡಲು ಸಂಶೋಧನಾ ಮನೋಭಾವ, ಕಲ್ಪನೆಗಳು ಮತ್ತು ಭಾವನೆಗಳು ಅತಿಮುಖ್ಯ.ಇತಿಹಾಸದಲ್ಲಿ ಬರವಣಿಗೆಗೆ ಬೇಕಾದ ಹಲವಾರು ವಿಚಾರಗಳು ದೊರೆಯುತ್ತವೆ. ನಿರಂತರ ಓದಿನಿಂದ ಸತ್ವಯುತ ಬರವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಧ.ಮಂ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ವಿಷಯಗಳನ್ನು ತಿಳಿದುಕೊಳ್ಳಲು ಸಾಕಷ್ಟು ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಆದರೆ ಒಂದು ವಿಷಯದ ಬಗೆಗಿನ ನಿಖರವಾದ ಜ್ಞಾನ ದೊರೆಯಬೇಕಾದರೆ ಪುಸ್ತಕಗಳು ಮತ್ತು ಲೇಖನಗಳನ್ನು ಅವಲಂಬಿಸುವುದೇ ಸೂಕ್ತ ಎಂದರು.
ಒಂದು ವಿಷಯದ ಕುರಿತು ಬರೆಯುವಾಗಲು ಖಚಿತ ಮಾಹಿತಿಗಳನ್ನು ದಾಖಲಿಸುವುದು ಅತ್ಯಗತ್ಯ. ತಂತ್ರಜ್ಞಾನಗಳಿಂದ ಪಡೆಯುವ ಮಾಹಿತಿಗಳ ನಿಖರತೆಯ ಬಗ್ಗೆ ಪರಿಶೀಲನೆ ನಡೆಸುವ ಅನಿವಾರ್ಯತೆಯಿದೆ. ವಿದ್ಯಾರ್ಥಿ ಜೀವನದಲ್ಲಿ ಬರವಣಿಗೆಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಬರೆದ ಲೇಖನವನ್ನು ಪ್ರಕಟ ಮಾಡುವ ಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸನ್ಮತಿ ಕುಮಾರ್, ವಿದ್ಯಾರ್ಥಿ ಪ್ರತಿನಿಧಿ ಗೌರವಿ ಹಾಗೂ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂತಿಮ ಬಿ.ಎ. ವಿದ್ಯಾರ್ಥಿನಿಯರಾದ ಅಕ್ಷಯ್ ಎಸ್. ಸ್ವಾಗತಿಸಿ, ಮಾನಸ ಮತ್ತು ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ವಂದಿಸಿದರು.