ಬೆಳ್ತಂಗಡಿ: ಪೊಲೀಸರ ನೇತೃತ್ವದಲ್ಲಿ ಶಾಂತಿ ಸಭೆ

0

ಬೆಳ್ತಂಗಡಿ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಮುಖಂಡರ ಶಾಂತಿ ಸಭೆಯು ಬೆಳ್ತಂಗಡಿ ಶ್ರೀ ಮಂಜುನಾಥ ಕಲಾ ಭವನದಲ್ಲಿ ಆ.21ರಂದು ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಗಣೇಶೋತ್ಸವವನ್ನು ಪ್ರತಿಯೊಬ್ಬರೂ ಕಾನೂನಿನ ಮಿತಿಯಲ್ಲಿ ಯಶಸ್ವಿಯಾಗಿ ನಡೆಸಲು ಇಲಾಖೆಯಿಂದ ಸಂಪೂರ್ಣ ಸಹಕಾರವಿದೆ. ಆದರೆ ಕಾನೂನನ್ನು ಮೀರಿದರೆ ಕಾನೂನಿನ್ವಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್ಲಾ ಹಬ್ಬಗಳನ್ನು ಸಂಭ್ರಮಿಸೋಣ, ಕಾನೂನು ಮೀರಿ ಹಬ್ಬಗಳನ್ನು ಆಚರಿಸಲು ಅವಕಾಶವಿಲ್ಲ ಎಂದರು.

ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ಪೋಲಿಸ್ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ್ ಮಠ್ ಯಾವುದೇ ಧರ್ಮದ ಹಬ್ಬಗಳಲ್ಲಿ ಯಾವುದೇ ಕಾರಣಕ್ಕೂ ಡಿಜೆ ಅಳವಡಿಸಲು ಮತ್ತು ರಾತ್ರಿ 10 ಘಂಟೆಯ ಬಳಿಕ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಡಿಜೆ ಮತ್ತು ಧ್ವನಿವರ್ಧಕ ಅಳವಡಿಸಿದರೆ ಮುಲಾಜಿಲ್ಲದೆ ಸಂಘಟಕರು ಮತ್ತು ಧ್ವನಿವರ್ಧಕ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ದ.ಕ ಜಿಲ್ಲೆ ಮತೀಯ ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಶಾಮೀಯಾನ ಮಾಲೀಕರು, ಸೌಂಡ್ಸ್ ಮತ್ತು ಲೈಟಿಂಗ್ ಮಾಲೀಕರು, ಪ್ಲೇಕ್ಸ್ ಬ್ಯಾನರ್ ಮಾಲೀಕರು ಸೇರಿದಂತೆ ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ವಿವಿಧ ಮಸೀದಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಭಿಪ್ರಾಯಗಳನ್ನು ಮುಕ್ತವಾಗಿ ಸ್ವಾಗತಿಸಿದ ಪೋಲಿಸ್ ಇಲಾಖೆ ಯಾವುದೇ ರೀತಿಯ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಬೆಳ್ತಂಗಡಿ ಪೋಲಿಸ್ ಠಾಣೆಯ ಸಿಬ್ಬಂದಿ ಜಗದೀಶ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here