ಬೆಳ್ತಂಗಡಿ; ತಾಲೂಕಿನ ಜನರ ಬಹುದಿನಗಳ ಬೇಡಿಕೆಯೊಂದು ಈಡೇರುವ ಹಂತದಲ್ಲಿದೆ. ವಕೀಲರು ಮತ್ತು ಸಾರ್ವಜನಿಕರ ಕೂಗಿಗೆ ಸರ್ಕಾರ ಮನ್ನಣೆ ನೀಡಿದ್ದು ಬೆಳ್ತಂಗಡಿಯ ಪ್ರಥಮ ಹಂತದ ನ್ಯಾಯಾಲಯ ಸಂಕೀರ್ಣದ ಕಾಮಗಾರಿಗಾಗಿ ಈಗಾಗಲೇ ೯ ಕೋಟಿ ರೂ ಅನುದಾನ ಘೋಷಿಸಿದೆ. ಈ ಅನುದಾನದಲ್ಲಿ ನಡೆಯಲಿರುವ ಕಾಮಗಾರಿಯ ಕುರಿತು ಚರ್ಚಿಸಲು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಜುಲೈ ೨ರಂದು ಬೆಳ್ತಂಗಡಿ ನ್ಯಾಯಾಲಯ ಮತ್ತು ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲಿಯೇ ಉzಶಿತ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಜಾಗ ಗುರುತಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಗೋವರ್ಧನ್ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ನಾಯ್ಕ್‌ರವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈ ಕುರಿತು ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮನು ಬಿ.ಕೆ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಸಂದೇಶ್ ಕೆ. ಮತ್ತು ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಬೆಳ್ತಂಗಡಿ ವಕೀಲರ ಭವನದಲ್ಲಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ನೇತೃತ್ವದಲ್ಲಿ ವಕೀಲರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಈಗ ಇರುವ ನ್ಯಾಯಾಲಯವನ್ನು ಕೆಡವಿ ಅದೇ ಸ್ಥಳದಲ್ಲಿ ಉzಶಿತ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಒಕ್ಕೊರಲ ಬೇಡಿಕೆ: ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಈ ವೇಳೆ ಮಾತನಾಡಿ ನೂತನ ನ್ಯಾಯಾಲಯ ಸಂಕೀರ್ಣದ ಮಂಜೂರಾತಿಯಾಗುವಲ್ಲಿ ಸರಕಾರದ ಮಟ್ಟದಲ್ಲಿ ಒತ್ತಡ ತಂದು ನಮ್ಮ ಜೊತೆ ಕೈ ಜೋಡಿಸಿದ ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ, ವಿಧಾನ ಪರಿಷತ್ ಶಾಸಕರುಗಳಾದ ಐವನ್ ಡಿ. ಸೋಜಾ ಮತ್ತು ಪ್ರತಾಪಸಿಂಹ ನಾಯಕ್‌ರವರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಲೋಕೋಪಯೋಗಿ ಇಲಾಖೆಯ ಜಿಲ್ಲಾ ಅಧೀಕ್ಷಕರು, ಕಾರ್ಯನಿರ್ವಾಹಕ ಇಂಜಿನಿಯರ್, ಬೆಳ್ತಂಗಡಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಿಬ್ಬಂದಿ ವರ್ಗದವರು ನಮ್ಮ ಜೊತೆ ಉತ್ತಮ ಬಾಂಧವ್ಯ ಇರಿಸಿಕೊಂಡು ಅನುದಾನ ಮಂಜೂರಾತಿಗಾಗಿ ಶ್ರಮಿಸಿದ್ದು ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ವಸಂತ ಮರಕಡ ಅವರು ಮುಂದೆ ಈ ಕಾಮಗಾರಿ ಪೂರ್ಣಗೊಳ್ಳುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಅಲ್ಲದೆ ಈಗ ಇರುವ ನ್ಯಾಯಾಲಯ ನಾದುರಸ್ತಿಯಲ್ಲಿದ್ದು ಅದನ್ನೇ ಕೆಡವಿ ಅದೇ ಸ್ಥಳದಲ್ಲಿ ಉದ್ದೇಶಿತ ನೂತನ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಾಣ ಮಾಡಬೇಕೆಂಬುದು ನಮ್ಮ ವಕೀಲರ ಸಂಘದ ಒಕ್ಕೊರಲ ಬೇಡಿಕೆಯಾಗಿದೆ. ಈಗಾಗಲೇ ಜಿಲ್ಲಾ ನ್ಯಾಯಾಧೀಶರಲ್ಲಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯವರು ಸಹ ನಮ್ಮ ಜೊತೆ ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು ಹೊಸ ನ್ಯಾಯಾಲಯದ ಸಂಕೀರ್ಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ವಕೀಲರ ಭವನದಲ್ಲಿ ನ್ಯಾಯಾಲಯದ ಕಾರ್ಯಕಲಾಪಗಳನ್ನು ಮತ್ತು ಕಚೇರಿ ಕೆಲಸಗಳನ್ನು ನಡೆಸಲು ಸ್ಥಳಾವಕಾಶ ನೀಡಲು ವಕೀಲರ ಸಂಘ ಬದ್ಧವಾಗಿರುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ವಕೀಲರ ಸಂಘದ ಹಿರಿಯ ಸಮಿತಿ ಚೇರ್ಮೆನ್ ಅಲೋಶಿಯಸ್ ಲೋಬೋ ಮತ್ತು ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್, ಬಿ. ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚುವರಿ ಸರ್ಕಾರಿ ವಕೀಲ ಮನೋಹರ ಕುಮಾರ್ ಎ., ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಕ್ಕಪ್ಪ, ವಕೀಲರ ಸಂಘದ ಮಾಜಿ ಅಧ್ಯಕ್ಷರುಗಳಾದ ಶಿವಕುಮಾರ್ ಎಸ್.ಎಂ, ಸೇವಿಯರ್ ಪಾಲೇಲಿ, ಶಶಿಕಿರಣ್ ಜೈನ್, ಕೋಶಾಧಿಕಾರಿ ಪ್ರಶಾಂತ್ ಎಂ, ಜತೆ ಕಾರ್ಯದರ್ಶಿ ವಿನಯ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಚಿದಾನಂದ ಪಿ, ಪ್ರವೀಣ್ ಕುಮಾರ್, ಹಿರಿಯ ವಕೀಲರಾದ ವೈ. ರಾಧಾಕೃಷ್ಣ, ಶ್ರೀನಿವಾಸ ಗೌಡ, ಬದರೀನಾಥ ಸಂಪಿಗೆತ್ತಾಯ ಮೊದಲಾದವರು ಉಪಸ್ಥಿತರಿದ್ದರು.