ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್.: ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ಹಿರಿಯ ವಕೀಲ ಬಾಲನ್

0

ಬೆಳ್ತಂಗಡಿ: ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಲೇ ಇದ್ದರೂ ಕಾನೂನಿನ ಮೂಲಕವೇ ಜಾರಿಕೊಳ್ಳುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಕಾನೂನಿನ ಕುಣಿಕೆಯ ಒಳಗೆ ಎಳೆದು ತರಲು ಪ್ರಯತ್ನ ಜೋರಾಗಿ ನಡೆದಿದೆ.
ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದಡಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ದೂರುದಾರ ಇಬ್ರಾಹಿಂ ತೆಕ್ಕಾರು ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ತೆಕ್ಕಾರು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ‘ಕಂಟ್ರಿ” ಶಬ್ದವನ್ನು ಮುಸ್ಲಿಂ ಸಮುದಾಯದ ಕೆಲವರಿಗೆ ಟೀಕಿಸಿ ಬಳಸಿದ್ದರು. ಬಳಿಕ ಕೇಸು ದಾಖಲಾಗಿತ್ತು.‌ ಈ ಎಫ್‌ಐಆ‌ರ್ ರದ್ದುಕೋರಿ ಅರ್ಜಿ ಸಲ್ಲಿಸಿ, ಪ್ರಕರಣಕ್ಕೆ ತಕ್ಷಣ ತಡೆಯಾಜ್ಞೆ ನೀಡುವಂತೆ 2025 ಮೇ 4 ರಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠ, 2025 ಮೇ 22ರಂದು ಪ್ರಕರಣಕ್ಕೆ ತಡೆಯಾಜ್ಞೆ ನೀಡಿತ್ತು.

ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಗಗುರುವಾರ‌ ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ‘ವೆಕೇಟಿಂಗ್ ಸ್ಟೇ’ ಅರ್ಜಿ ಸಲ್ಲಿಸಿದ್ದಾರೆ. ‘ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿ ಮೇ 22 ರಂದು ವಿಚಾರಣೆ ಬಂದಾಗ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಸರ್ಕಾರದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರವರು, ಉಪ್ಪಿನಂಗಡಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಿದ್ದಗೊಳಿಸಿದ್ದಾರೆ ಎಂದು ಹೈಕೋರ್ಟ್ ಗೆ ತಿಳಿಸಿದ್ದರು.
ಚಾರ್ಜ್ ಶೀಟ್ ಸಿದ್ದಗೊಂಡಿದ್ದು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಅಡ್ಡಿಯಾಗಿದೆ. ಹಾಗಾಗಿ ಚಾರ್ಜ್ ಶೀಟ್ ಸಲ್ಲಿಸಲು ಪೂರಕವಾಗುವಂತೆ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಕೋರಲಾಗಿದೆ.
ಅಲ್ಲದೇ, ಪೊಲೀಸರು ಪೂಂಜಾ ವಿರುದ್ಧ ಚಾರ್ಜ್ ಶೀಟ್ ಪೂರ್ಣಗೊಳಿಸಿರುವುದರಿಂದ ಹರೀಶ್ ಪೂಂಜಾ ಹಾಕಿರುವ ಎಫ್‌ಐಆರ್ ರದ್ದು ಅರ್ಜಿಯನ್ನು ಅನೂರ್ಜಿತಗೊಳಿಸಬೇಕು ಅಥವಾ ತಿದ್ದುಪಡಿ ಮಾಡಿ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಬೇಕು.

ಹಾಗಾಗಿಯೂ ಕೂಡಾ ಎಫ್‌ಐಆರ್ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸುವುದು ಸರಿಯಾದ ಕ್ರಮ ಎಂದು ಕೂಡಾ ಎಸ್ ಬಾಲನ್ ಅರ್ಜಿಯಲ್ಲಿ ವಾದಿಸಿದ್ದಾರೆ.

ಹರೀಶ್ ಪೂಂಜಾ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 39/2023(IPC 153, 153-A, 505(1)(3)(c), 505(2), ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ 57/2024 (IPC 504, 353),
ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 58/2024(IPC 143, 147, 341, 504, 506 r/w 149),
ಬಜ್ಪೆ ಠಾಣೆಯಲ್ಲಿ ಕ್ರೈಂ ನಂ 239/2016 (IPC 143, 147, 290, 160, 504 r/w 149),
ಬಂಟ್ವಾಳ ಠಾಣೆಯಲ್ಲಿ ಕ್ರೈಂ ನಂ 117/2017(IPC 142, 143, 188 r/w 149),
ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ 77/2023(IPC 143, 353, 504 r/w 149),
ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 105/2023 (IPC 504, 505(2) ಎಫ್ಐಆರ್ ಗಳು ದಾಖಲಾಗಿದೆ.
ಪುನರಾವರ್ತಿತ ಅಪರಾಧ ಮಾಡುವ ಹರೀಶ್ ಪೂಂಜಾ ತಡೆಯಾಜ್ಞೆಯ ಅವಕಾಶಕ್ಕೆ ಅನರ್ಹರಾಗಿದ್ದಾರೆ ಎಂದು ಬಾಲನ್ ನ್ಯಾಯಪೀಠದ ಗಮನ‌ ಸೆಳೆದಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here