ಮಚ್ಚಿನ: ಗ್ರಾಮದ ಸ.ಕಿ.ಪ್ರಾ. ಶಾಲೆ ನೆತ್ತರದಲ್ಲಿ ಜೂ. 2ರಂದು ಶಾಲಾ ಪ್ರಾರಂಭೋತ್ಸವವನ್ನು ವಿದ್ಯಾರ್ಥಿಗಳಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ್ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಶಿಕ್ಷಕರೊಂದಿಗೆ ಸೇರಿ ವಿದ್ಯಾರ್ಥಿಗಳಿಗೆ ಆರತಿ, ಪುಷ್ಪಾರ್ಚನೆ ಮತ್ತು ಸಿಹಿ ತಿಂಡಿ ಹಂಚಿ ಶಾಲೆಗೆ ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ಸರಕಾರ ನೀಡಿದ ಪಠ್ಯಪುಸ್ತಕದೊಂದಿಗೆ ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ್ಯನಿರ್ವಾಹಕ, ನೌಕರರ ಸಂಘ ದಕ್ಷಿಣ ಕನ್ನಡ ಅಧ್ಯಕ್ಷ ಆನಂದ್ ಕುಮಾರ್ ಸುಮಾರು ಒಂದು ವರ್ಷಕ್ಕೆ ಬೇಕಾಗಿರುವ ನೋಟು ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ನೀಡಿರುತ್ತಾರೆ. ಅವುಗಳನ್ನು ಶಾಲೆಗೆ ತಲುಪಿಸಲು ವಿನಯ್ ಊರ್ಲ ಸಹಕರಿಸಿದ್ದಾರೆ.
ಇವುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ವಾರ್ಡಿನ ಸದಸ್ಯ ಪ್ರಮೋದ್ ಕುಮಾರ್ ಮತ್ತು ಮಹಾಬಲ ದೇವಾಡಿಗ ಶುಭ ಹಾರೈಸಿದರು. ವೇದಿಕೆಯಲ್ಲಿ ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ಸುಗುಣ, ಅಂಗನವಾಡಿ ಕಾರ್ಯಕರ್ತೆ ಗೀತಾ, ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಆಗ್ನೇಸ್ ಪ್ರಮೀಳಾ ಪ್ರಾಸ್ತವಿಕವಾಗಿ ಮಾತನಾಡಿ ಇಲಾಖೆ ಮಾಹಿತಿಯನ್ನು ನೀಡಿದರು. ರೂಪ ರೊಡ್ರಿಗಸ್ ಸ್ವಾಗತಿಸಿದರು. ಚಿರಂಜೀವಿ ವಂದಿಸಿದರು.