


ಬೆಳ್ತಂಗಡಿ: ಸಮಾಜ ಮುಖಿ ಚಿಂತನೆಗಳೊಂದಿಗೆ ಒಂದಷ್ಟು ಯುವಕರು ಸೇರಿಕೊಂಡು ಸಮಾಜದ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವ ರಾಜಕೇಸರಿ ಸಂಘಟನೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಜೂ. 1ರಂದು ಕುತ್ಯಾರು ಹೊಸಮನೆ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಇದರ 13 ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಟ್ರಸ್ಟ್ ಮುಡಿಪು ಇದರ ಆಶ್ರಯದಲ್ಲಿ ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ನಡೆದ ಸ್ಥಳೀಯ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣೆ, ಉತ್ತಮ ಅಂಕ ಪಡೆದ ಮಕ್ಕಳಿಗೆ ಸನ್ಮಾನ ಹಾಗೂ ಸಮಾಜ ರತ್ನ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಮಾಜದ ಹಲವಾರು ಅಶಕ್ತ ಕುಟುಂಬಗಳಿಗೆ ನೆರವು, ಶೌಚಾಲಯ, ಸ್ವಚ್ಛಾಲಯ ಸೇರಿದಂತೆ ವಿವಿಧ ರೀತಿಯಲ್ಲಿ ಸಮಾಜ ಸೇವೆಗಳನ್ನು ಮಾಡುತ್ತಿರುವ ರಾಜಕೇಸರಿ ಸಂಘಟನೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಬ್ಯಾಗ್ ಹಾಗೂ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿರುವುದು ಇತರರಿಗೆ ಮಾದರಿ. ಸಂಘಟನೆಯ ಪ್ರತಿಯೊಂದು ಕಾರ್ಯ ಯೋಜನೆಗಳಿಗೆ ಸದಾ ಬೆಂಬಲಿನಾಗಿ ಇರುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಎಸ್. ಎಸ್. ಎಲ್. ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಾರು 140 ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ ವಸಂತ ಶೆಟ್ಟಿ, ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು.
ಜ್ಞಾನ ಮಂದಾರ ಶೈಕ್ಷಣಿಕ ಸಾಂಸ್ಕೃತಿಕ ಸೇವಾ ಟ್ರಸ್ಟ್ ಬೆಂಗಳೂರು ಸಂಸ್ಥಾಪಕ ಹೆಚ್.ಸೋಮಶೇಖರ್ ಪುಸ್ತಕ ವಿತರಣೆ ಮಾಡಿದರಲ್ಲದೇ ದೀಪಕ್ ಜಿ. ಅವರ ಸೇವಾ ಕಾರ್ಯ ಗುರುತಿಸಿ ಸಂಸ್ಥೆಯ ಪರವಾಗಿ ಗೌರವಿಸಿದರು. ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ, ಪತ್ರಕರ್ತ ಮನೋಹರ ಬಳೆಂಜ, ಉದ್ಯಮಿ ಕರುಣಾಕರ ಬಂಗೇರ, ಸಂಜೀವ ಮೂಲ್ಯ, ಸಂತೋಷ್ ಕೊಲ್ಯ, ವಿನೋದ್ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಜಯ ಕಂಗಿತ್ತಿಲ್ ಸ್ವಾಗತಿಸಿದರು. ದೀಕ್ಷಿತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಬೆಳ್ತಂಗಡಿ ಧನ್ಯವಾದವಿತ್ತರು.









