ಕಂತ್ರಿ ಬ್ಯಾರಿ ಹೇಳಿಕೆ: ಒಂದೆಡೆ ವಿಷಾದ, ಮತ್ತೊಂದೆಡೆ ಬೆಂಬಲ

0

ಬೆಳ್ತಂಗಡಿ: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೀಡಿದ್ದ ಕಂತ್ರಿ ಬ್ಯಾರಿ ಹೇಳಿಕೆ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದ್ದ ಮಧ್ಯೆ, ಮೇ ೭ರಂದು ತೆಕ್ಕಾರು ದೇಗುಲ ಟ್ರಸ್ಟ್‌ನ ಕೆಲವು ಸದಸ್ಯರು, ಆಡಳಿತ ಮೊಕ್ತೇಸರರು ಮತ್ತು ಗ್ರಾಮದ ಸುತ್ತಮುತ್ತಲಿನ ಮಸೀದಿಗಳ ಮುಖಂಡರ ಜತೆಗೆ ಮಾತುಕತೆ ನಡೆದು, ಇಲ್ಲಿ ಹಿಂದು-ಮುಸ್ಲಿಂ ಧರ್ಮೀಯರು ಪರಸ್ಪರ ಸಹಕಾರದಿಂದಲೇ ಮುನ್ನಡೆಯಬೇಕು ಎಂಬ ತೀರ್ಮಾನ ಮಾಡಿದ್ದಾರೆ.

ಮೇ.೩ರಂದು ಹರೀಶ್ ಪೂಂಜರು ನೀಡಿದ್ದ “ಕಂತ್ರಿ ಬ್ಯಾರಿ” ಹೇಳಿಕೆಯಿಂದ ತೆಕ್ಕಾರು ಬ್ರಹ್ಮಕಲಶೋತ್ಸವಕ್ಕೆ ಪೂರ್ಣ ಸಹಕಾರ ನೀಡಿದ್ದ ಸ್ಥಳೀಯ ಮುಸ್ಲಿಮರು ಬೇಸರಗೊಂಡಿದ್ದರು. ಶಾಸಕರ ಹೇಳಿಕೆ ಬಗ್ಗೆ ದೇವಸ್ಥಾನದ ಆಡಳಿತ ಸಮಿತಿಯ ನಿಲುವೇನು ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ದೇಗುಲಕ್ಕೆ ಸಂಬಂಧಿಸಿದ ಪ್ರಮುಖರು ಸ್ಥಳೀಯ ಮುಸ್ಲಿಂ ಒಕ್ಕೂಟದೊಂದಿಗೆ ಸಭೆ ನಡೆಸಿ, ಬಿಕ್ಕಟ್ಟು ಶಮನಗೊಳಿಸುವ ಯತ್ನ ಮಾಡಿತ್ತು. ನಂತರ ಶ್ರೀ ಗೋಪಾಲಕೃಷ್ಣ ಭಟ್ರಬೈಲ್ ದೇವರಗುಡ್ಡೆ ಸೇವಾ ಟ್ರಸ್ಟ್ ಮೂಲಕ ಸರಳೀಕಟ್ಟೆ ತೆಕ್ಕಾರಿನ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಿಗೆ ಪತ್ರ ಬರೆದು, “ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರು ಆಡಿರುವ ಮಾತುಗಳು ಗ್ರಾಮಸ್ಥರ ಮನಸ್ಸಿಗೆ ಬೇಸರ ತಂದಿದೆ. ಇದಕ್ಕೆ ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸುತ್ತದೆ. ನಿಮ್ಮ ಸಮುದಾಯದ ಸಹಕಾರವನ್ನು ಆಡಳಿತ ಮಂಡಳಿ ಸ್ವಾಗತಿಸುತ್ತದೆ. ಮುಂದೆಯೂ ಸಹ ಎಲ್ಲಾ ಸಮುದಾಯದವರು ಒಬ್ಬರಿಗೊಬ್ಬರು ಸಹಕಾರದಿಂದ ಬದುಕಬೇಕೆಂಬ ನಮ್ಮ ಆಶಯ ಮುಂದಿಡುತ್ತಿzವೆ” ಎಂದು ತಿಳಿಸಲಾಗಿತ್ತು.

ಇದರಿಂದಾಗಿ ಶಾಸಕರ ಹೇಳಿಕೆ ಸೃಷ್ಟಿಸಿದ್ದ ಗೊಂದಲ ಅಸಮಾಧಾನಗಳು ಶಮನಗೊಂಡಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಕೆಲ ದಿನಗಳ ಬಳಿಕ ದೇವಸ್ಥಾನದ ವಠಾರದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮತ್ತು ವಿಶ್ವ ಹಿಂದು ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ನೇತೃತ್ವದಲ್ಲಿ ಗ್ರಾಮದ ಕೆಲವರೊಂದಿಗೆ ಸಭೆ ನಡೆಸಲಾಯಿತು. ಕ್ಷೇತ್ರದ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿ ಪುಂಡಾಟ ಮೆರೆಯಲು ಯತ್ನಿಸಿದ ವಿಘ್ನ ಸಂತೋಷಿಗಳಿಗೆ ಶಾಸಕರು ಖಾರವಾಗಿ ಪ್ರತಿಕ್ರಿಯಿಸಿದ್ದು, ಇದಕ್ಕೆ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಹೆಚ್ಚಿನ ಟ್ರಸ್ಟಿಗಳು, ದೇವಸ್ಥಾನದ ಆಡಳಿತ ಮಂಡಳಿ ಬೆಂಬಲಿಸುವ ಬಗ್ಗೆ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಗಿದೆ ಎಂಬ ಪತ್ರಿಕಾ ಹೇಳಿಕೆ ನವೀನ್ ನೆರಿಯ ಕಡೆಯಿಂದ ಬಂದಿದೆ. ಆಡಳಿತ ಮಂಡಳಿ ಮುಸ್ಲಿಂ ಮುಖಂಡರೊಂದಿಗೆ ಸೌಹಾರ್ದ ಸಭೆ ನಡೆಸಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಯಾರಾದರೂ ವೈಯಕ್ತಿಕವಾಗಿ ವ್ಯವಹರಿಸಿದ್ದರೆ ಅದಕ್ಕೆ ಆಡಳಿತ ಮಂಡಳಿ ಜವಾಬ್ದಾರಿಯಲ್ಲ ಎಂದು ಟ್ರಸ್ಟಿಗಳು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದಾಖಲಿಸಲಾಗಿದೆ.

ಮೇ ೭ರಂದು ತಮ್ಮ ನೇತೃತ್ವದಲ್ಲಿ ನಡೆದಿದ್ದ ಸಂಧಾನ ಸಭೆ ಬಗ್ಗೆ ಖಚಿತಪಡಿಸಿದ ಟ್ರಸ್ಟ್ ಅಧ್ಯಕ್ಷ ನಾಗಭೂಷಣ ರಾವ್, ದೇವಸ್ಥಾನದ ಸಭಾವೇದಿಕೆಯಲ್ಲಿ ಶಾಸಕರು ಆ ರೀತಿ ಹೇಳಿಕೆ ನೀಡಬಾರದಿತ್ತು. ಯಾರೋ ಕೆಲವರು ತಪ್ಪು ಮಾಡಿದರೆ ಇಡೀ ಧರ್ಮವನ್ನು ಗುರಿ ಮಾಡಲು ಸಾಧ್ಯವಿಲ್ಲ. ಬ್ರಹ್ಮಕಲಶೋತ್ಸವವನ್ನು ಮುಸ್ಲಿಂ ಧರ್ಮೀಯರ ಸಹಕಾರದೊಂದಿಗೆ ನಡೆಸಲಾಗಿದೆ. ಅವರು ಸಭಾವೇದಿಕೆ, ಅನ್ನಛತ್ರಕ್ಕೆ ಭೂಮಿಯನ್ನೂ ನೀಡಿದ್ದರು ಎಂದು ಮಾಹಿತಿ ಹಂಚಿಕೊಂಡರು. ಈ ವಿವಾದವನ್ನು ಮತ್ತಷ್ಟು ಮುಂದುವರಿಸುವುದು ಬೇಡ. ಎಲ್ಲವೂ ಶಮನಗೊಂಡಿದೆ. ಉಳಿದ ಯಾವ ಸಭೆಗಳ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬ್ರಹ್ಮಕಲಶೋತ್ಸವದ ಅನ್ನಛತ್ರ ಮತ್ತು ಸಭಾವೇದಿಕೆಗೆ ದೇಗುಲದ ಸಮೀಪದಲ್ಲಿ ವಾಸ್ತವ್ಯವಿರುವ ಟಿಕೆ ಅಬ್ಬಾಸ್ ಎಂಬವರು ಭೂಮಿ ನೀಡಿದ್ದರು. ಅವರ ಅಳಿಯ ರಫೀಕ್ ಲೆತೀಫಿ ಮಾತನಾಡಿ, ದೇವಸ್ಥಾನದ ಟ್ರಸ್ಟ್ ಮತ್ತು ಆಡಳಿತ ಸಮಿತಿಯವರು ಸ್ಥಳಿಯ ಮಸೀದಿಗಳ ಮುಖಂಡರೊಂದಿಗೆ ಸಭೆ ನಡೆಸಿ, ಸ್ಪಷ್ಟೀಕರಣ ಪತ್ರವನ್ನೂ ನೀಡಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲೇನಾಗಿತ್ತು? ಮೇ. ೭ರ ಸೌಹಾರ್ದ ಸಭೆಯಲ್ಲಿ “ಮುನೀರ್ ಎಂಬವರು ಮರವನ್ನು ನೀಡಿದ್ದರು. ಅಬ್ಬಾಸ್ ವೇದಿಕೆ ನಿರ್ಮಿಸಲು ಸ್ಥಳ ನೀಡಿದ್ದರು. ಭಕ್ತಾದಿಗಳ ವಾಹನ ಪಾಕಿಂಗ್ ವ್ಯವಸ್ಥೆಯನ್ನು ಟಿ.ಎಚ್ ಉಸ್ತಾದರ ಮಕ್ಕಳ ಒಡೆತನದ ಜಮೀನಿನಲ್ಲಿ ಮಾಡಲಾಗಿತ್ತು. ನೀರಿನ ವ್ಯವಸ್ಥೆಗೆ ಮತ್ತು ಅನ್ನ ಸಂತರ್ಪಣೆಗೆ ಮುಸ್ಲಿಮರ ಜಾಗವನ್ನೇ ಉಪಯೋಗಿಸಲಾಗಿತ್ತು. ಇದಲ್ಲದೆ ಆರ್ಥಿಕವಾಗಿಯೂ ಗ್ರಾಮದ ಮುಸ್ಲಿಮರು ದೇವಸ್ಥಾನಕ್ಕೆ ಸಹಾಯ ನೀಡಿದ್ದರು. ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಸ್ಥಳೀಯ ಮುಸ್ಲಿಮರು ಬ್ಯಾನರ್‌ಗಳನ್ನು ಅಳವಡಿಸಿದ್ದರು” ಎಂದು ಮುಸ್ಲಿಂ ಒಕ್ಕೂಟದ ಪ್ರತಿನಿಧಿಗಳು ಸೌಹಾರ್ದ ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳ ಗಮನ ಸೆಳೆದಿದ್ದರು.

LEAVE A REPLY

Please enter your comment!
Please enter your name here