
ಬೆಳ್ತಂಗಡಿ: ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಹಣದ ವಿಚಾರದಲ್ಲಿ ಯವಕರ ವಿರುದ್ದ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿಗಳಿಗೆ ಕರ್ನಾಟಕ ಹೈ ಕೋರ್ಟ್ ಜಾಮೀನು ನೀಡಿದೆ. ಘಟನೆ ಆಧರಿಸಿ ಬೆಳ್ತಂಗಡಿ ಪೋಲಿಸರು ಮೂವರು ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆ, ಕಲಂ 109,351(2) ಜೊತೆ 3(5) ಕೊಲೆಯತ್ನ ಪ್ರಕರಣ ದಾಖಲಿಸಿದ್ದರು. ಇದೀಗ ಮೊದಲ ಆರೋಪಿ , ನ್ಯಾಯಾಂಗ ಬಂಧನದಲ್ಲಿರುವ ಹಮೀದ್ ಎಂಬವರಿಗೆ ನಿಯಮಿತ ಜಾಮೀನು ಮತ್ತು ಎರಡನೇ ಆರೋಪಿ ರಿಯಾಝ್ ಮತ್ತು ಮೂರನೇ ಆರೋಪಿ ಅರ್ಷಾದ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸದ್ರಿ ಪ್ರಕರಣ ಕಳೆದ ಫೆ. 5ರಂದು ಮಾಚಾರಿನಲ್ಲಿ ನಡೆದಿತ್ತು.
ಈ ಪ್ರಕರಣದಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು ಇನ್ನೋರ್ವ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುತ್ತಾನೆ. ಏ.21ರಂದು ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಇದ್ದ ಪೀಠವು ಈ ಜಾಮೀನು ಮಂಜೂರು ಮಾಡಿತು. ಆರೋಪಿಗಳ ಪರ ಹೈಕೋರ್ಟ್ ವಕೀಲರುಗಳಾದ ಮುಸ್ತಫಾ ಬೆಳ್ತಂಗಡಿ, ಅನ್ವರ್ ಕೆ.ಪಿ ಕುಪ್ಪೆಟ್ಟಿ ಮತ್ತು ಮೋನಿಸ್ ಸಾಹುಕರ್ ವಾದವನ್ನು ಮಂಡಿಸಿದ್ದಾರೆ.