ಎ.20: ಗುರುವಾಯನಕೆರೆಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ-ಕಾಂಗ್ರೆಸ್ ಸಮಾವೇಶ – ಡಿ.ಸಿ.ಎಂ. ಡಿ.ಕೆ. ಶಿವಕುಮಾರ್ ಆಗಮನ: 10 ಸಾವಿರ ಜನ ಸೇರುವ ನಿರೀಕ್ಷೆ: ರಕ್ಷಿತ್ ಶಿವರಾಂ – ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಬೆಳ್ತಂಗಡಿ ಕಾಂಗ್ರೆಸ್ ಉಭಯ ಬ್ಲಾಕ್ ವತಿಯಿಂದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಏ.20ರಂದು ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಹಲವರು ಸಮಾವೇಶದಲ್ಲಿ ಭಾಗವಹಿಸಲಿದ್ದು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ. ಏ.15ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು ಕಾರ್ಯಕ್ರಮದ ವಿವರ ನೀಡಿದರು.

ನುಡಿದಂತೆ ನಡೆದ ಸರ್ಕಾರ: ರಾಜ್ಯ ಸರ್ಕಾರ ಎರಡು ವರ್ಷದ ಅವಧಿಯನ್ನು ಪೂರ್ಣಗೊಳಿಸಿದೆ. ಯಾವ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತೋ ಆ ಎಲ್ಲಾ ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸುವ ಮುಖಾಂತರ ನುಡಿದಂತೆ ನಡೆದ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ. ಬೆಳ್ತಂಗಡಿ ತಾಲೂಕಿಗೆ 350 ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗಾಗಿ ಬಂದಿದೆ ಎಂದು ತಿಳಿಸಿದ ರಕ್ಷಿತ್ ಶಿವರಾಂ ಅವರು ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳ ವಿಚಾರಗಳನ್ನು ಇಟ್ಟುಕೊಂಡು ರಣಕಹಳೆ ಮೊಳಗಿಸಬೇಕು. ಎಲ್ಲಾ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು. ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳೂ ಕೆ.ಪಿ.ಸಿ.ಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಆಹ್ವಾನ: ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಚೈತನ್ಯವನ್ನು ಕೊಡಬೇಕು, ಹೊಸ ಆರ್ಥಿಕ ನೀತಿಯನ್ನು ಮಾಡಬೇಕು, ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕು ಎಂಬ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ನಿರಂತವಾಗಿ ಬ್ರಹ್ಮಕಲಶೋತ್ಸವ, ಕಂಬಳದಂತಹ ಹತ್ತು ಹಲವು ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಏ. 20ರಂದು ನಡೆಯುವ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಟ್ಟಡ ಉದ್ಘಾಟನೆಯಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಮಾಡಲಿದ್ದಾರೆ ಎಂದು ತಿಳಿಸಿದ ರಕ್ಷಿತ್ ಅವರು ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ 10 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ. 81 ಗ್ರಾಮಗಳಲ್ಲಿ ಪೂರ್ವಭಾವಿ ಸಭೆ ನಡೆಯುತ್ತಿದೆ. ಗ್ರಾಮ ಸಮಿತಿ, ಬೂತ್ ಸಮಿತಿ ಪುನರ್ ರಚನೆ ಮಾಡುತ್ತಿದ್ದೇವೆ. ಕಾರ್ಯಕ್ರಮದಲ್ಲಿ ನಿಕೇತ್ ರಾಜ್ ಮೌರ್ಯರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಬಿ. ರಮಾನಾಥ್ ರೈ, ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭಾಗವಹಿಸಲಿ. ಗ್ಯಾರಂಟಿ ಯೋಜನೆಯ ಎಲ್ಲಾ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬೆಳ್ತಂಗಡಿ ಬ್ಲಾಕ್ ಗ್ರಾಮೀಣ ಅಧ್ಯಕ್ಷ ಕೆ.ಎಮ್. ನಾಗೇಶ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೆಬಾಸ್ಟಿಯನ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಮ್, ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಲಕ್ಷ್ಮಣ ಗೌಡ, ಪ್ರಮೋದ್ ಮತ್ತು ಅಯೂಬ್, ಅಝಾರ್ ಉಪಸ್ಥಿತರಿದ್ದರು.

ಶಾಸಕರು ದ್ವೇಷ ಭಾಷಣ ಮಾಡುವುದಲ್ಲ; ಅಭಿವೃದ್ಧಿ ಮಾಡಬೇಕು– ಶಾಸಕರು ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಅದನ್ನು ಬಿಟ್ಟು ಸದನದಲ್ಲಿ ದ್ವೇಷ ಭಾಷಣ ಮಾಡುವ ಮುಖಾಂತರ ಸದನದ ಗಮನ ಸೆಳೆಯುವುದಲ್ಲ. ಇದರ ಬದಲು ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು. ಅನುದಾನ ಇಲ್ಲ ಎಂದು ಇಲ್ಲ. ಪುತ್ತೂರು ತಾಲೂಕಿಗೆ ಬೇಕಾದಷ್ಟು ಅನುದಾನ ತರುತ್ತಿದ್ದಾರೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬರುತ್ತಿದೆ. ಕ್ರೀಡಾಂಗಣ ತಂದಿದ್ದಾರೆ. ದೇವಸ್ಥಾನಗಳ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಾ ಇದ್ದಾರೆ ಎಂದು ರಕ್ಷಿತ್ ಶಿವರಾಂ ಹೇಳಿದರು.

LEAVE A REPLY

Please enter your comment!
Please enter your name here