ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಮಹಿಳಾ ದಿನಾಚರಣೆ: ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಮಾ. 9ರಂದು ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸ್ವಾಮಿ ಸಭಾಭವನದಲ್ಲಿ ಅವಳು ಬದುಕಲು ಕಲಿಸಿದವಳು ಎನ್ನುವ ಶೀರ್ಷಿಕೆಯ ಅಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಹಿರಿಯ ನಾಟಿವೈದ್ಯ ಡೀಕಮ್ಮ ಅಲ್ಯೊಟ್ಟು ಉಜಿರೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಿಲ್ಲೂರಿನ ವೈದ್ಯರಾದ ಡಾ|| ವಾಣಿ ಸುಗುಣ ಕುಮಾರ್ ಮಹಿಳೆಯರಿಗೆ ಈ ಹಿಂದೆ ಆಗುತ್ತಿದ್ದ ಶೋಷಣೆಗಳು ದಬ್ಬಾಳಿಕೆಯನ್ನು ಹಾಗೂ ಮಹಿಳೆಯರು ಯಾವುದೇ ಸಂಧಿಗ್ಧ ಪರಿಸ್ಥಿತಿಯಲ್ಲಿ ಒತ್ತಡವನ್ನು ನಿಭಾಯಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು.

ಆ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ, ಯುವವಾಹಿನಿ ಬೆಳ್ತಂಗಡಿ ಘಟಕ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಮಹಿಳೆಯರಿಗೆ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ರಶ್ಮಿ ನಾರಾವಿ ಹಾಗೂ ಹಿರಿಯ ನಾಟಿ ವೈದ್ಯೆ ಡೀಕಮ್ಮ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಹಿಳಾ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕಿ ಲೀಲಾವತಿ ಪಣಕಜೆ, ಘಟಕದ ಕಾರ್ಯದರ್ಶಿ ಮಧುರ ರಾಘವ, ಮಹಿಳಾ ನಿರ್ದೇಶಕಿ ಪ್ರಮೀಳಾ ಮಾಲೂರು, ಮಹಿಳಾ ಸಂಚಾಲನ ಸಮಿತಿಯ ಕಾರ್ಯದರ್ಶಿ ಶಾಂಭವಿ ಮುಂಡೂರು ಉಪಸ್ಥಿತರಿದ್ದರು.

ಸೇವಂತಿ ನಿರಂಜನ್ ಸ್ವಾಗತಿಸಿ, ಸುಧಾಮಣಿ ಆರ್ ಮತ್ತು ಕುಮಾರಿ ಜಿತೀಕ್ಷ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಘಟಕದ ಮಹಿಳಾ ಸದಸ್ಯರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬೇಬಿಂದ್ರ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here