ರೂಪೇಶ್ ಗೌಡ ಶಿಬಾಜೆ
ಬೆಳ್ತಂಗಡಿ : ಹೋಬಳಿ ಕೇಂದ್ರ ಕೊಕ್ಕಡದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಕಟ್ಟಡ ಮಾತ್ರವಿದ್ದು, ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂಬ ಸಾರ್ವಜನಿಕರ ಆಕ್ಷೇಪ ಹೆಚ್ಚಾಗುತ್ತಿದೆ.
ತುರ್ತು ಸಂದರ್ಭದಲ್ಲಿ ಜನ ಸಾಮಾನ್ಯರ ಸೇವೆಗೆಂದೇ ಆರಂಭಿಸಿರುವ ೧೦೮ ಆಂಬ್ಯುಲೆನ್ಸ್ ಸೇವೆಯನ್ನು ಬಡವರು ನಂಬಿಕೊಂಡಿರುತ್ತಾರೆ. ಆದರೆ ಇರುವ ಎರಡು ಆಂಬ್ಯುಲೆನ್ಸ್ ಪೈಕಿ ಒಂದು ವಾಹನದ ೪ ಟಯರ್‌ಗಳು ಸವೆದು ಹೋಗಿ ಪಂಚರ್ ಆಗಿ ಮೂಲೆಗೆ ಬಿದ್ದು ತುಕ್ಕುಹಿಡಿಯುತ್ತಿದೆ. ಅದರ ಬದಲಿಗೆ ತಂದಿರುವ ಇನ್ನೊಂದು ಆಂಬ್ಯುಲೆನ್ಸ್‌ನ ಟಯರ್‌ಗಳೂ ಸವೆದು ಹೋಗಿ ಜನಸೇವೆಗೆ ಲಭ್ಯವಿಲ್ಲ. ಇದನ್ನು ಸರಿಪಡಿಸುವ ಗೋಜಿಗೆ ಆರೋಗ್ಯ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. 108 ಆಂಬ್ಯುಲೆನ್ಸ್ ನಿರ್ವಹಣೆ ಮಾಡುತ್ತಿರುವ ಜಿವಿಕೆ ಸಂಸ್ಥೆ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ ಎಂದು ಜನ ಕಿಡಿಕಾರುತ್ತಿದ್ದಾರೆ.
ಸುಮಾರು 15 ದಿನಗಳಿಂದ ಸಮರ್ಪಕವಾಗಿ ಆಂಬ್ಯುಲೆನ್ಸ್ ಸೇವೆ ರೋಗಿಗಳಿಗೆ ಸಿಗುತ್ತಿಲ್ಲ. ಇದರಿಂದ ಕ್ಲಪ್ತ ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲಾಗದೆ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಅಂಬುಲೆನ್ಸ್‌ಗೆ ಚಿಕಿತ್ಸೆ ಯಾವಾಗ? ಕೊಕ್ಕಡ ಹೋಬಳಿ ವ್ಯಾಪ್ತಿಯ ಶಿಶಿಲ, ಶಿಬಾಜೆ, ಪಟ್ರಮೆ, ಅರಸಿನಮಕ್ಕಿ ಗ್ರಾಮಗಳಿಗೆ ಇಲ್ಲಿನ ಆಂಬ್ಯುಲೆನ್ಸ್ ಸೇವೆ ಅತೀ ಅವಶ್ಯ. ಇಲ್ಲವಾದಲ್ಲಿ ಖಾಸಗಿ ಆಂಬ್ಯುಲೆನ್ಸ್ ಮೊರೆ ಹೋಗಬೇಕು. ಆದರೆ ಅದು ಬಡವರಿಗೆ ದುಬಾರಿ. ಕೊಕ್ಕಡದ ೧೦೮ ಆಂಬ್ಯುಲೆನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಮತ್ತು ಚಾಲಕರನ್ನು ಉಪ್ಪಿನಂಗಡಿ, ಶಿರಾಡಿ ಭಾಗಕ್ಕೆ ಕರ್ತವ್ಯ ಮಾಡಲು ಕರೆಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಆಂಬ್ಯುಲೆನ್ಸ್ ಸೇವೆ ಇಲ್ಲಿನ ಜನರಿಗೆ ಸಿಗುತ್ತದೋ ಇಲ್ಲವೋ ಎಂಬುದೇ ಯಕ್ಷಪ್ರಶ್ನೆ.
ಸುಂದರ ಕಟ್ಟಡದಲ್ಲಿ ಸೌಕರ್ಯಗಳೇ ಇಲ್ಲ!: ರೂ. 3 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿಶಾಲವಾದ ಎಕ್ಸರೇ ರೂಮ್ ಇದೆ. ಉದ್ಘಾಟನೆ ಸಂದರ್ಭದಲ್ಲಿ ಬೇರೆ ಆಸ್ಪತ್ರೆಯಿಂದ ತಾತ್ಕಾಲಿಕವಾಗಿ ತಂದಿರಿಸಿದ ಹಳೆ ಮೆಷಿನ್ ದೂಳು ಹಿಡಿಯುತ್ತಿದೆ.
ಮರಣೋತ್ತರ ಪರೀಕ್ಷೆ ಮಾಡಲು ರೂಮಿನ ವ್ಯವಸ್ಥೆ ಇದ್ದರೂ ಸಿಬ್ಬಂದಿ ಕೊರತೆಯಿಂದ ಅದು ಕಾರ್ಯನಿರ್ವಹಿಸುತ್ತಿಲ್ಲ. ಡೆಂಟಲ್ ವಿಭಾಗಕ್ಕೆ ಹಾಗೂ ಕಣ್ಣಿನ ವಿಭಾಗಕ್ಕೆ ಉತ್ತಮವಾಗಿ ಸ್ಪಂದಿಸುವ ವೈದ್ಯರು ಇದ್ದರೂ ಅವರಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಇದರಿಂದ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಒಟ್ಟಾರೆ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳಿಂಗಿಂತ ಸಮಸ್ಯೆಗಳ ಮೇಲಾಟವೇ ಹೆಚ್ಚಾಗಿದೆ!
“ಅಂಬುಲೆನ್ಸ್‌ನ ಟಯರ್‌ಗಳು ಸವೆದು ಹೋಗಿವೆ. ರಿಪೇರಿ ಕೆಲಸ ವಿಳಂಬಗೊಂಡಿರುವುದು ಹೌದು. ಆದರೆ, ವಾಹನ ನಿರ್ವಹಣೆ ಕೊಕ್ಕಡ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿಲ್ಲ. ಈ ವಿಷಯವನ್ನು ಜಿಲ್ಲಾ ಆರೋಗ್ಯಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಇದು ರಿಪೇರಿಯಾಗಲಿದೆ ಎಂಬ ಮಾಹಿತಿ ಬಂದಿದೆ” – ಡಾ. ತುಷಾರ, ಕೊಕ್ಕಡ ಆಸ್ಪತ್ರೆ ಆರೋಗ್ಯಾಧಿಕಾರಿ
ಪ್ರಾಣ ಉಳಿಸಬಹುದಿತ್ತು! – “ಇಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ನಿರ್ಣಯ ಕೈಗೊಂಡು, ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದೆವು. ಶಾಸಕರ ಬಳಿ ಕೂಡ ಸಮಸ್ಯೆಗಳ ಕುರಿತು ಮಾತನಾಡಿ, ಇದು ಬಗೆಹರಿಯುವ ಹಂತಕ್ಕೆ ತಲುಪಿಲ್ಲ. ೧೦೮ ಅಂಬ್ಯುಲೆನ್ಸ್ ಸೇವೆ ೧೫ ದಿನಗಳಿಂದ ಅಲಭ್ಯ. ಹಳ್ಳಿಂಗೇರಿಯಲ್ಲಿ ಇತ್ತೀಚಿಗೆ ಬ್ರೈನ್ ಹ್ಯಾಮರೇಜ್‌ಗೆ ಒಳಗಾಗಿ, ಅಂಬ್ಯುಲೆನ್ಸ್ ಸೇವೆಗೆಂದು ಕರೆ ಮಾಡಿದಾಗ, “ಸುಸ್ಥಿತಿಯಲ್ಲಿ ಇಲ್ಲದ ಕಾರಣ ಸೇವೆ ಅಲಭ್ಯ” ಎಂದು ಆಸ್ಪತ್ರೆಯವರು ತಿಳಿಸಿದ್ದರು. ಈ ಆಂಬ್ಯುಲೆನ್ಸ್ ಸೇವೆ ಸಿಗುತ್ತಿದ್ದರೆ ವ್ಯಕ್ತಿಯ ಪ್ರಾಣವನ್ನಾದರೂ ಉಳಿಸಬಹುದಿತ್ತು ಖಾಸಗಿ ವಾಹನದಲ್ಲಿ ಮಂಗಳೂರಿಗೆ ಸಾಗಿಸುವಾಗ ದಾರಿ ಮದ್ಯೆಯೇ ಮೃತಪಟ್ಟಿದ್ದಾರೆ. ಅಧಿಕಾರಿಗಳು ಮತ್ತು ಜಿ.ವಿ.ಕೆ ಕಂಪನಿಯವರು ಎಚೆತ್ತು ಕೊಕ್ಕಡ ಸಮುದಾಯ ಅರೋಗ್ಯ ಕೇಂದ್ರದ ಅಂಬ್ಯುಲೆನ್ಸ್‌ನ್ನು ಶೀಘ್ರವೇ ಸರಿಪಡಿಸಬೇಕು” – ಯೋಗೀಶ್ ಆಳಂಬಿಲ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಕೊಕ್ಕಡ