ಬೆಳ್ತಂಗಡಿ: ಇತ್ತೀಚೆಗೆ ರಚನೆಗೊಂಡಿರುವ “ಸೌತಡ್ಕ ಸಂರಕ್ಷಣಾ ವೇದಿಕೆ” ಎಂಬ ಹೆಸರಿನಲ್ಲಿ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಇತರ 4 ಮಂದಿ ಸದಸ್ಯರು ನೂತನ ವ್ಯವಸ್ಥಾಪನಾ ಸಮಿತಿಗೆ ಚುನಾವಣೆಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಪತ್ರಿಕಾ ವರದಿಯ ಮಾಹಿತಿ ಪಡೆದುಕೊಂಡಿದ್ದು, ಅವರನ್ನು ಸೌತಡ್ಕ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಮರು ಆಯ್ಕೆ ಮಾಡಬಾರದು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಧ್ಯಕ್ಷ ಮತ್ತು ದತ್ತಿ ಇಲಾಖೆ ಸಚಿವರು, ಆಯುಕ್ತರು ಹಾಗೂ 8 ಮಂದಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಿಗೆ ಲಿಖಿತ ದೂರು ನೀಡಿದ್ದೇವೆ ಎಂದು ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಪ್ರಶಾಂತ್ ಪೂವಾಜೆ ತಿಳಿಸಿದ್ದಾರೆ.
ಬೆಳ್ತಂಗಡಿಯ ಸುವರ್ಣ ಆರ್ಕೇಡ್‌ನಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸೌತಡ್ಕ ದೇವಾಲಯದಲ್ಲಿ ಕಾನೂನು ಬಾಹಿರವಾಗಿ ಮತ್ತು ದತ್ತಿ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಭಕ್ತರು ದೇವರಿಗೆ ಸಮರ್ಪಿಸಿರುವ ಹರಕೆ ಗಂಟೆಗಳ ಹರಾಜಿನಲ್ಲಾದ ಆವ್ಯವಹಾರ ಬಗ್ಗೆ ವಿವರಣೆ ನೀಡಲಾಗಿದೆ. ಅದೇ ರೀತಿ, 19 ವರ್ಷ ದೇವಳದ ಸಮಿತಿ ಸದಸ್ಯರಾಗಿದ್ದುಕೊಂಡು, ಪ್ರತಿ ಹುಂಡಿ ಎಣಿಕೆ ಮಾಡುವ ವೇಳೆ ಸ್ವಲ್ಪ ಸ್ವಲ್ಪ ಹಣ ತೆಗೆದಿರಿಸಿ, ತಮ್ಮ ಆಸ್ತಿ ಖರೀದಿಯ ಸಾಲ ಮರು ಪಾವತಿ ಮಾಡಿರುವ ವಿಶ್ವನಾಥ ಪೂಜಾರಿ ಅವರ ಅವ್ಯವಹಾರದ ಬಗ್ಗೆ ಮರು ತನಿಖೆ ನಡೆಸುವಂತೆಯೂ ಕೋರಲಾಗಿದೆ ಎಂದು ತಿಳಿಸಿದ್ದಾರೆ.
2017 ರಿಂದ 2020 ನೇ ಸಾಲಿನ ವ್ಯವಸ್ಥಾಪನಾ ಸಮಿತಿ, ಸೌತಡ್ಕ ದೇಗುಲದ ಗಣೇಶ ಕಲಾ ಮಂದಿರದ ಬಲ ಭಾಗದಲ್ಲಿದ್ದ ಹಣ್ಣು ಕಾಯಿಯೊಂದಿಗೆ ಗಂಟೆ ಅಂಗಡಿ, ಅವಲಕ್ಕಿ ಪಂಚಕಜ್ಜಾಯ ತಯಾರಿ ಟೆಂಡರ್ ವ್ಯವಸ್ಥೆಯಲ್ಲಿ ಮತ್ತು ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ-ನಿರ್ವಹಣೆಯಲ್ಲಿ ಅವ್ಯವಹಾರ ನಡೆಸಲಾಗಿದ್ದು, ಇದು ದೇಗುಲದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಬಗ್ಗೆ ದಾಖಲೆಗಳು ಸ್ಪಷ್ಟವಾಗಿ ತಿಳಿಸುತ್ತವೆ ಎಂದು ಪೂವಾಜೆ ಮಾಹಿತಿ ಹಂಚಿಕೊಂಡಿದ್ದಾರೆ.
ದೇವರಿಗೆ ಕಂಚಿನ ಗಂಟೆಗಳಿಂದ ಪಂಚಲೋಹದ ಪ್ರಭಾವಳಿಗೆ ತಯಾರಿ ಮಜೂರಿ ಸೇರಿ ಸುಮಾರು 170 ಕೆ. ಜಿ. ತೂಕದ ಪ್ರಭಾವಳಿಗೆ 3650 ಕೆ. ಜಿ. ಗಂಟೆಗಳನ್ನು ನೀಡಿದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ಗಂಟೆ ಹಗರಣದ ವ್ಯತ್ಯಾಸ ಸರಿದೂಗಿಸಲು, ಸಮಿತಿಯ ಎಲ್ಲಾ ಸದಸ್ಯರು ನೀಡಿರುವ ತನಿಖಾ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತದೆ ಎಂದು ಪೂವಾಜೆ ತಿಳಿಸಿದ್ದಾರೆ.
ದೇವಳದ ಗಂಟೆ ಹರಾಜು ಪ್ರಕ್ರಿಯೆ ಹಗರಣದ ತನಿಖೆಯನ್ನು ದತ್ತಿ ಇಲಾಖೆಯ ಸಹಾಯಕ ಆಯುಕ್ತರು ನಡೆಸಿದ್ದು, ಇವರ ತನಿಖಾ ವರದಿಗೆ ಭಿನ್ನವಾಗಿ ದೇವಾಲಯದಿಂದ ಶಾಸಕರಿಗೆ ಹಾಗೂ ದೇವಳಕ್ಕೆ ಸಂದಾಯ ಮಾಡಿದ ಮೊತ್ತದ ದಿನಾಂಕ ಮತ್ತು ಇಲಾಖಾ ಪ್ರತಿಬಂಧ ಪುಟದಲ್ಲಿರುವ ದಿನಾಂಕಕ್ಕೂ ವ್ಯತ್ಯಾಸವಿದ್ದು, ಒಟ್ಟು ಗಂಟೆಗಳ ತೂಕದ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಲಾಗಿತ್ತು. ಆದರೆ ಪ್ರಶ್ನೆಗಳಿಗೆ ವ್ಯತಿರಿಕ್ತ ಮಾಹಿತಿ ನೀಡಿರುವುದರಿಂದ ಇಲ್ಲಿಯೂ ಸಂಶಯ ವ್ಯಕ್ತವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಕಾನೂನು ಬಾಹಿರವಾಗಿ ದತ್ತಿ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಆದಾಯದಲ್ಲಿ ಜಿಲ್ಲೆಯ 3ನೇ ಸ್ಥಾನದಲ್ಲಿರುವ ಸೌತಡ್ಕ ದೇವಸ್ಥಾನದ ಸಿ. ಸಿ. ಟಿವಿ ಕ್ಯಾಮರಾದ ಡಿ. ವಿ. ಆರ್. ನ ಯೂಸರ್ ನೇಮ್ ಮತ್ತು ಪಾಸ್ವಾರ್ಡ್‌ನ್ನು ಸಿ. ಸಿ. ಕ್ಯಾಮರಾ ನಿರ್ವಹಣೆ ಮಾಡುತ್ತಿದ್ದವರು ತಮ್ಮ ಸ್ವಂತ ಹೆಸರಿನಲ್ಲಿ ಲಾಗಿನ್ ಮಾಡಿರುವುದು ಮತ್ತು ಗಂಟೆಗಳ ವಿಲೇವಾರಿ ಸಂದರ್ಭದಲ್ಲಿ ಸಿ. ಸಿ. ಕ್ಯಾಮರಗಳ ವೀಡಿಯೋ ದಾಖಲೆಗಳನ್ನು ಶಾಸಕರ ವಿಧಾನ ಸಭೆ ಹೇಳಿಕೆಯ ನಂತರವೂ ಸಂಗ್ರಹಿಸದಿರುವುದು ಅನುಮಾನಕ್ಕೆಡೆಮಾಡಿದೆ. 2020ರ ಡಿ. 23 ರಂದು ಕಾರ್ಯನಿರ್ವಹಣಾಧಿಕಾರಿಯವರ ಕಚೇರಿ ಆದೇಶದಲ್ಲಿ ಕರ್ತವ್ಯ ಲೋಪದಿಂದಾಗಿ ದೇವಳದ ಭದ್ರತಾ ವ್ಯವಸ್ಥೆಗೂ ತೊಡಕುಂಟಾಗುವ ಸಾಧ್ಯತೆ ಇದೆ ಎಂಬ ಅಂಶವನ್ನು ಗಮನಿಸಿದಾಗ, ಸಿ. ಸಿ. ಕ್ಯಾಮರಾದ ಅಸಮರ್ಪಕ ನಿರ್ವಹಣೆ ಗೊತ್ತಾಗಿದೆ. ಶಾಸಕರ ವಿಧಾನ ಸಭಾ ಚರ್ಚೆಯ ದಿನದ (11.03.2020) 29 ದಿನದ ಹಿಂದಿನ ಅಂದರೆ ಸುಮಾರು 2020 ಫೆ. 10 ರ ನಂತರದ ಗಂಟೆ ವಿಲೇವಾರಿ ವೀಡಿಯೋ ಇಲ್ಲದಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ತಿಂಗಳೊಂದಕ್ಕೆ ರೂ. 10,000 ದಂತೆ ಸಿ. ಸಿ. ಕ್ಯಾಮರ ನಿರ್ವಹಣೆ ಬಾಬ್ತು ಅರುಣಾ ಕಂಪ್ಯೂಟರ್‌ನ ಪ್ರಶಾಂತ್ ಸಿ. ಹೆಚ್. ಅವರಿಗೆ ದೇವಸ್ಥಾನದಿಂದ ನೀಡಲಾಗಿದೆ. ಗಂಟೆ ಹಗರಣ ನಡೆದ 2019 ರ ಸಾಲಿನಲ್ಲಿ ಸಿ. ಸಿ. ಕ್ಯಾಮರ ನಿರ್ವಹಣೆ ಬಾಬ್ತು ತಿಂಗಳಿಗೆ ರೂ.10,000ದಂತೆ ನೀಡಿದ ದಾಖಲೆಗಳನ್ನೇ ನೀಡದಿರುವುದು ಹಗರಣದಲ್ಲಿ ಅರುಣಾ ಕಂಪ್ಯೂಟರ್‌ನ ಪ್ರಶಾಂತ್ ಸಿ. ಹೆಚ್. ಭಾಗಿಯಾದ ಬಗ್ಗೆಯೂ ಸಂಶಯವಿದೆ. ಪ್ರಸಕ್ತ ಇವರು ಸೌತಡ್ಕ ಸಂರಕ್ಷಣಾ ಸಮಿತಿ ಸಲಹೆಗಾರರಾಗಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಸತ್ಯ ಹೊರ ಬರಬಹುದು ಎಂದು ಪೂವಾಜೆ ಹೇಳಿದ್ದಾರೆ.
ಸೌತಡ್ಕ ಸಂರಕ್ಷಣಾ ವೇದಿಕೆ ಹೆಸರಿನಲ್ಲಿ ಹೋರಾಟ ಮಾಡುತ್ತಿರುವ ಸುಬ್ರಹ್ಮಣ್ಯ ಶಬರಾಯ ಮತ್ತು ಪ್ರಶಾಂತ್ ರೈ ಅವರಿಗೆ ಗೊತ್ತಿದ್ದ ವಿಶ್ವನಾಥ ಕೊಲ್ಲಾಜೆ, ರಾಘವ ಕೊಲ್ಲಾಜೆ, ಮತ್ತು ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್(ರಿ)ನ ಇವರ ಸರ್ವೆ ನಂಬರ್ ಅಲ್ಲದೇ ಇನ್ನೊಂದು ಸರ್ವೆ ನಂಬರಿನಲ್ಲಿರುವ 1. 23 ಎಕರೆ ಭೂಮಿಯನ್ನು ಯಾರ ಹೆಸರಿಗೆ ನೋಂದಾಯಿಸಿಕೊಂಡಿರುತ್ತಾರೆ ಎಂಬ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು. ಇವರು ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾನದ ಸಮಿತಿ ಅಧ್ಯಕ್ಷರಾಗಿದ್ದಾಗ ತಮ್ಮ ಮಾಲಕತ್ವದ ಪ್ರೆಸ್ ಗೆ ಚೆಕ್ ನೀಡಿರುವ ದಾಖಲೆಗಳು ಲಭ್ಯವಿದ್ದು ಇದು ದತ್ತಿ ಇಲಾಖೆಯ ನಿಯಮದ ಉಲ್ಲಂಘನೆಯಾಗಿರುತ್ತದೆ ಎಂದು ಪೂವಾಜೆ ದೂರಿದ್ದಾರೆ.
ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಸೀಮೆ ದೇವಸ್ಥಾನದಲ್ಲಿ 2004 ರಿಂದ 2009 ರ ಎಪ್ರಿಲ್‌ವರೆಗೆ ಆಡಳಿತ ನಡೆಸಿದ ಸುಬ್ರಹ್ಮಣ್ಯ ಶಬರಾಯ ಅವರು ಯಾವುದೇ ದಾಖಲೆಗಳನ್ನು ನೀಡದೇ ದೇವಾಲಯದ ಬ್ಯಾಂಕ್ ಬ್ಯಾಲೆನ್ಸ್ ಕೇವಲ 9427.25 ಪೈಸೆ ಜಮೆ ಎಂದು ತೋರಿಸಿದ್ದರು. ನಂತರ ತಹಶೀಲ್ದಾರರ ಆಡಳಿತದಲ್ಲಿ ಕೇವಲ ಒಂದೇ ವರ್ಷದಲ್ಲಿ ರೂ. 2,80,635 ಬ್ಯಾಂಕ್ ಬ್ಯಾಲೆನ್ಸ್ ಬಂದಿದ್ದು, ಮುಂದಿನ ವರ್ಷದಲ್ಲಿ 5,31,998 ರೂ ಬ್ಯಾಂಕ್ ಬ್ಯಾಲೆನ್ಸ್ ಬಂದಿದೆ. ಹೀಗಾಗಿ, ಈ ಕುರಿತೂ ಅನುಮಾನ ಮೂಡಿದೆ. ಈ ಸಂಬಂಧ ದಿನಾಂಕ 14.02.2015ರಂದು ಭಕ್ತರು ನೀಡಿದ ದೂರಿನಂತೆ 29.10.2015 ರಂದು ದತ್ತಿ ಇಲಾಖೆ ಮಂಗಳೂರಿನ ಸಹಾಯಕ ಆಯುಕರಿಗೆ ಸೂಕ್ತ ಕ್ರಮ ಜರುಗಿಸಿ ಕ್ರಮ ಕೈಗೊಳ್ಳಬೇಕೆಂದು ದಕ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. 10.08.2016ರಂದು ಎ. ಎನ್. ಶಬರಾಯ ಹುರುಳಿ ಮಜಲು, ಕೊಕ್ಕಡ ಎಂಬವರು ಕರ್ನಾಟಕ ಧಾರ್ಮಿಕ ಸಂಸ್ಥೆಗಳ ಕಾರ್ಯದರ್ಶಿ ಮತ್ತು ಆಯುಕ್ತರಿಗೆ, ಸೌತಡ್ಕ ದೇಗುಲದ ವ್ಯವಸ್ಥಾಪನಾ ಸಮಿತಿಗೆ ಬರೆದು, ಸುಬ್ರಹ್ಮಣ್ಯ ಶಬರಾಯ ಮತ್ತು ವಿಶ್ವನಾಥ ಶೆಟ್ಟಿಯವರನ್ನು ಆಯ್ಕೆ ಮಾಡುವುದಕ್ಕೆ ಆಕ್ಷೇಪ ಸಲ್ಲಿಸಿದ್ದಾರೆ ಎಂದು ಪೂವಾಜೆ ವಿವರಣೆ ನೀಡಿದ್ದಾರೆ.
ಈ ಎಲ್ಲಾ ದಾಖಲೆಗಳೊಂದಿಗೆ, ಗಂಟೆ ಅವ್ಯವಹಾರದ ತನಿಖಾ ವರದಿಯನ್ನು ಧಾರ್ಮಿಕ ಪರಿಷತ್‌ನ ಮಖ್ಯಸ್ಥರಾದ ಸಚಿವರಿಗೆ, ಆಯುಕ್ತರಿಗೆ ಮತ್ತು ರಾಜ್ಯ ಧಾರ್ಮಿಕ ಪರಿ?ತ್ ಸದಸ್ಯರುಗಳಿಗೆ ಸಲ್ಲಿಸಿದ್ದು ಸೂಕ್ತ ತನಿಖೆ ನಡೆಸಿ ದೇವಳಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಪೂವಾಜೆ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥ ವಿಠಲ ಉಪಸ್ಥಿತರಿದ್ದರು. ಗ್ರಾಮಸ್ಥ ಪುರಂದರ ಸ್ವಾಗತಿಸಿ, ಧನ್ಯವಾದವಿತ್ತರು.