ನಡ: ನೀರು ಸಿಗದ ಬೋರ್‌ವೆಲ್‌ಗಳನ್ನು(ಕೊಳವೆ ಬಾವಿ) ಮುಚ್ಚದೆ ಹಾಗೆಯೇ ಬಿಟ್ಟು ರಾಜ್ಯದಲ್ಲಿ ಹಲವು ಮಕ್ಕಳು ಪ್ರಾಣ ಕಳೆದುಕೊಂಡ ಘಟನೆಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದಕ್ಕೆ ಕಾರಣ ಬೋರ್‌ವೆಲ್ ಕೊರೆದ ನಂತರ ನೀರು ಸಿಗದಿದ್ದಾಗ ಮಾಲಕರು ಇದರ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸುತ್ತಿರುವುದೇ ಕಾರಣವಾಗಿದೆ.
ಇದೇ ರೀತಿಯ ಅಪಾಯಕಾರಿ ಕೊಳವೆ ಬಾವಿಯೊಂದು ನಡ ಶಾಲಾ ಬಳಿ ಇತ್ತು. ನಡ ಕಿ. ಪ್ರಾ. ಶಾಲೆಯ ಬಳಿ 1 ತಿಂಗಳ ಹಿಂದೆ ಪಂಚಾಯತ್ ವತಿಯಿಂದ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ನೀರು ಸಿಗದೆ ಇದ್ದ ಕಾರಣ ಅದರ ಕೇಸಿಂಗ್ ಪೈಪ್ ಹೊರತೆಗೆದು ಗುಂಡಿಯನ್ನು ಮುಚ್ಚದೆ ಅದರ ಮೇಲೆ ಗೋಣಿಯನ್ನು ಹಾಕಿ ಕೊರೆದ ಕಂಪೆನಿಯವರು ಹಾಗೆ ಬಿಟ್ಟು ಹೋಗಿದ್ದರು. ಕೊರೆದ ಬೋರ್‌ವೆಲ್ ಗುಂಡಿಯನ್ನು ಹಾಗೆಯೇ ಬಿಟ್ಟಿರುವುದು ಕಂಡ ಒಬ್ಬ ಸರಕಾರಿ ನೌಕರ ತಾನೇ ಮುಂದೇ ಬಂದು ಹಾರೆ ಹಿಡಿದು ಗುಂಡಿ ಮುಚ್ಚಿದ ಘಟನೆ ನಡೆದಿದೆ.
ಬೋರ್‌ವೆಲ್ ಕೊರೆದು ಹಾಗೆಯೇ ಬಿಟ್ಟಿದ್ದ ಗುಂಡಿಯನ್ನು ಪಂಚಾಯತ್ ಕಾರ್ಯದರ್ಶಿ ಕಿರಣ್ ತಾನೇ ಹಾರೆ ಹಿಡಿದು ಗುಂಡಿ ಮುಚ್ಚಿ, ಸಾರ್ವಜನಿಕರಿಗೆ ಆಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾರೆ. ಇಂತಹ ಒಬ್ಬ ಸರಕಾರಿ ನೌಕರ ನಮಗೆ ಕಾಣಸಿಗುವುದು ಬಹಳ ಅಪರೂಪ. ಅವರಲ್ಲಿ ಇರುವ ಈ ಗುಣ ಇತರರಿಗೆ ಪ್ರೇರಣೆಯಾಗಲಿ ಎಂದು ಗ್ರಾಮದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.