ಬೆಳ್ತಂಗಡಿ: ಕೆ. ಎಸ್. ಆರ್. ಟಿ. ಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟವಾಗಿದೆ.
ಡಿ. 20 ರಂದು ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ವಿಜಯ್ ಎಂಬವರು ತನ್ನ ಬೈಕ್ ನಲ್ಲಿ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಕ್ಕೇನಾ ಎಂಬಲ್ಲಿ ಎದುರಿನಿಂದ ಬಂದ ಕೆ. ಎಸ್. ಆರ್. ಟಿ. ಸಿ ಬಸ್ ಡಿಕ್ಕಿಯಾಗಿ ವಿಜಯ್ ಅವರಿಗೆ ಗಂಭೀರ ಗಾಯವಾಗಿತ್ತು.
ವಿಜಯ್ ಅವರ ತಲೆಗೆ, ಮುಖಕ್ಕೆ, ತೀವ್ರ ಗಾಯವಾಗಿದ್ದರಿಂದ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಮೃತಪಟ್ಟಿದ್ದರು. ಸಹಸವಾರ ಶೈಲೇಶ್ ಅವರ ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು ಉಜಿರೆ ಎಸ್. ಡಿ. ಎಮ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಶೈಲೇಶ್ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿ ಅದರಂತೆ ಆರೋಪಿ ಬಸ್ ಚಾಲಕ ಧಾರವಾಡದ ಅಶೋಕ ಭೋಸಲೆ (59) ಅವರಿಗೆ ಶಿಕ್ಷೆ ಪ್ರಕಟವಾಗಿದೆ.
ಪ್ರಕರಣದಲ್ಲಿ ವಿಚಾರಣೆ ನಡೆಸಿದ ಬೆಳ್ತಂಗಡಿ ಪ್ರಿನ್ಸಿಪಲ್ ಸಿ. ಜೆ. ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯದ ನ್ಯಾಯಾಧೀಶ ಸಂದೇಶ ಕೆ. ಪ್ರಕರಣದಲ್ಲಿ ಬಸ್ ಚಾಲಕ ಅಶೋಕ್ ಮೇಲಿನ ಆರೋಪ ಸಾಬೀತಾಗಿರುವುದರಿಂದ ಡಿ. 23 ಅವರಿಗೆ ಕಲಂ: 279 ಐ. ಪಿ. ಸಿ ಅಡಿಯಲ್ಲಿ 1 ತಿಂಗಳು ಸಾದಾ ಕಾರಾಗೃಹ ವಾಸ ಮತ್ತು 1000/- ರೂ ದಂಡ ತಪ್ಪಿದಲ್ಲಿ 1 ತಿಂಗಳು ಕಾರಾಗೃಹ, 337 ಐ. ಪಿ. ಸಿ ಅಡಿಯಲ್ಲಿ 1 ತಿಂಗಳು ಸಾದಾ ಕಾರಾಗೃಹ ವಾಸ ಮತ್ತು 500/- ರೂ ದಂಡ ತಪ್ಪಿದಲ್ಲಿ 15 ದಿನಗಳ ಕಾರಾಗೃಹ ಕಲಂ: 304(ಎ) ಐ. ಪಿ. ಸಿ ರಲ್ಲಿ 2 ವರ್ಷ ಕಠಿಣ ಕಾರಾಗೃಹ ವಾಸ ಮತ್ತು 1000/- ರೂ ದಂಡ ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳ ಕಾಲ ಕಾರಾಗೃಹ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ಮೇಲಾಧಿಕಾರಿಯವರ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಶಿವಕುಮಾರ ಬಿ. ತನಿಖೆಯನ್ನು ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದು, ಸರಕಾರದ ಪರವಾಗಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಆಶಿತಾ ಎಮ್. ಎ. ನ್ಯಾಯಾಲಯದಲ್ಲಿ ವಾದಿಸಿರುತ್ತಾರೆ. ಪ್ರಕರಣದಲ್ಲಿ ತನಿಖಾಧಿಕಾರಿಯವರ ಸಹಾಯಕರಾಗಿ ಹೆಡ್ ಕಾನ್ಸ್ ಟೇಬಲ್ ವಿಜಯಕುಮಾರ್ ರೈ, ಹರಿಶ್ಚಂದ್ರ ಎಮ್. ಕಾರ್ಯನಿರ್ವಹಿಸಿರುತ್ತಾರೆ. ಬೆಳ್ತಂಗಡಿ ಸಂಚಾರ ಠಾಣಾ ಪಿ. ಎಸ್. ಐ. ಓಡಿಯಪ್ಪಗೌಡ, ನ್ಯಾಯಾಲಯ ಕರ್ತವ್ಯದ ಪೊಲೀಸ್ ಸಿಬ್ಬಂದಿ ನಿಕೋಲಸ್ ಪಿಂಟೋ ಮತ್ತು ಸುನೀಲ್ ಪ್ರಕರಣದಲ್ಲಿ ಸಹಕರಿಸಿರುತ್ತಾರೆ.