


ಬೆಳ್ತಂಗಡಿ: ಗುಜರಾತ್ ರಾಜ್ಯದ ಸೂರತ್ ಸಮೀಪದ ಬಚೂರದಲ್ಲಿ ಡಿ. 11 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಾರ್ಮಾಡಿಯ ಆದಂ ಎಂಬವರ ಪುತ್ರ ಷರೀಫ್ ಮೂಸ ಕುಂಞ(46ವ) ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೆ. ಆರ್. ಎಸ್ ಪಕ್ಷದ ನೇತೃತ್ವದಲ್ಲಿ ನಡೆದ ‘ಸ್ಟಾಪ್ ರೇಪ್’ ಪ್ರತಿಭಟನೆಯಲ್ಲಿ ಭಾಗವಹಿಸಲು ಬಚೂರದಲ್ಲಿ ರಸ್ತೆ ಬದಿ ಪಾದಯಾತ್ರೆ ಹೋಗುತ್ತಿದ್ದ ಐವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಚಾರ್ಮಾಡಿಯವರಾಗಿದ್ದು ಪ್ರಸ್ತುತ ಮದ್ದಡ್ಕದಲ್ಲಿ ವಾಸವಾಗಿರುವ ಷರೀಫ್ ಮೂಸ ಕುಂಞೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೆ. ಆರ್. ಎಸ್ ಪಕ್ಷದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾಗಿದ್ದರು. ಚಾರ್ಮಾಡಿಯಲ್ಲಿದ್ದಾಗ ಖಾಸಗಿ ಬಸ್ ಪಾಲುದಾರರಾಗಿದ್ದರು. ಮದ್ದಡ್ಕದಲ್ಲಿ ಹೊಟೇಲ್ ನಡೆಸುತ್ತಿದ್ದರು. ಮೃತರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಹಾಗೂ ಪೊಲೀಸ್ ಇಲಾಖೆಯಲ್ಲಿರುವ ಸಹೋದರರಾದ ಅಶ್ರಫ್, ಅಕ್ಬರ್ ಮತ್ತು ಇಬ್ರಾಹಿಂ ಅವರನ್ನು ಅಗಲಿದ್ದಾರೆ.
ಇನ್ನುಳಿದಂತೆ ಕೆ. ಆರ್. ಎಸ್ ಪಕ್ಷದ ರಾಜ್ಯದ ಮುಖಂಡ ಮಂಡ್ಯ ಮೂಲದ ಲಿಂಗೇಗೌಡ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ಮೂಲದ ಅಮ್ಜದ್ ಮತ್ತು ನೌಫಲ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಮತ್ತಿಬ್ಬರನ್ನು ಕಲ್ಲಡ್ಕದ ಪ್ರವೀಣ್ ಪಿರೇರಾ ಮತ್ತು ಮಂಗಳೂರಿನ ಬಾಲಕೃಷ್ಣ ಎಂದು ಗುರುತಿಸಲಾಗಿದೆ.