ಬಂದಾರು: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು ಜಂಕ್ಷನ್ನಿಂದ ಬಟ್ಲಡ್ಕ ವರೆಗಿನ ರಸ್ತೆ ಹದೆಗೆಟ್ಟಿದ್ದು ಸಂಚಾರ ತ್ರಾಸದಾಯಕವಾಗಿದೆ. ಸುಮಾರು 2ಕಿ.ಮೀ. ಉದ್ದದ ಜಿಲ್ಲಾ ಪಂಚಾಯತ್ ರಸ್ತೆ ಇದಾಗಿದ್ದು 1ಕಿ.ಮೀ. ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ಪ್ರತಿದಿನ ನೂರಾರು ವಾಹನಗಳು ಚಲಾಯಿಸುತ್ತಿದ್ದು ಡಾಮರು ಎದ್ದು ಹೋಗಿ ಜಲ್ಲಿಕಲ್ಲು ರಸ್ತೆಯ ಉದ್ದಕ್ಕೂ ರಾರಾಜಿಸುತ್ತಿದೆ. ಅದೆಷ್ಟು ವಾಹನ ಸವಾರರು ಆಯ ತಪ್ಪಿ ರಸ್ತೆಗೆ ಬಿದ್ದು ಆಸ್ಪತ್ರೆ ದಾಖಲಾದ ಘಟನೆಗಳು ನಡೆದಿದೆ. ದಿನಂಪ್ರತಿ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಹಾಗೂ ಸಾರ್ವಜನಿಕರಿಗೆ ಪ್ರಮುಖ ರಸ್ತೆ ಇದಾಗಿದೆ.
ಬಂದಾರಿನಿಂದ ಬಟ್ಲಡ್ಕ ಸಂಪರ್ಕ ರಸ್ತೆ ಇದಾಗಿದ್ದು ನೂರು ಮನೆಗಳು ಈ ರಸ್ತೆಯ ವ್ಯಾಪ್ತಿಯಲ್ಲಿ ಒಳಗೊಂಡಿದೆ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿ.ಪಂ.ರಸ್ತೆ ಇದಾಗಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಹಾಗೂ ಗ್ರಾಮಸಭೆಯಲ್ಲಿಯೂ ಈ ಕುರಿತು ನಿರ್ಣಯ ಮಾಡಿ ಪತ್ರ ಕಳುಹಿಸಿದ್ದೇವೆ ಎಂದು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಸುದ್ದಿಗೆ ತಿಳಿಸಿದ್ದಾರೆ.