ಬೆಳ್ತಂಗಡಿ: ಅಂತಾರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ಕೇಂದ್ರ ಸರಕಾರ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಅತ್ಯುತ್ತಮ ಪ್ರವಾಸಿ ತಾಣಗಳು ಸ್ಪರ್ಧೆಯ ಸಾಹಸ ಪ್ರವಾಸೋದ್ಯಮ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕುತ್ಲೂರು ಗ್ರಾಮದ ಪ್ರತಿನಿಧಿಗಳನ್ನು ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಮಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಕುತ್ಲೂರು ಗ್ರಾಮದ ಪ್ರತಿನಿಧಿಗಳಾಗಿದ್ದ ಹರೀಶ್ ಡಾಕಯ್ಯ ಮತ್ತು ಶಿವರಾಜ್ ಅಂಚನ್ ಸೆ.27ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಉಪಸ್ಥಿತಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರು ಮತ್ತು ಇತರ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಈ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಮಂಗಳೂರಿನ ದಿ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿನಿಧಿಗಳಾಗಿ ಭಾಗವಹಿದ್ದ ಸುಂದರ್ ಕೋಟ್ಯಾನ್, ಸಂತೋಷ್ ಮೆಲ್ವಿನ್ ಮತ್ತು ಶಿವರಾಜ್ ಅಂಚನ್‌ರನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆ.ವಿ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಗೌರವಿಸಿ ಅಭಿನಂದಿಸಿದರು.
ಚುಣಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವ ಕಾರಣ ಜನಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ಇರಲಿಲ್ಲ.