ಕರಾಯ: ಶೈಖುನಾ ಕಾಸಿಂ ಮದನಿ ಕರಾಯ ಉಸ್ತಾದರ ಶಿಷ್ಯಂದಿರ ಸಿರಾಜುಲ್ ಫಲಾಹ್ ಅಸೋಸಿಯೇಷನ್ ಇದರ ವತಿಯಿಂದ ಖಿಳ್ ರಿಯಾ ಮಹಿಳಾ ಶರೀಅತ್ ಕಾಲೇಜು ಇದರ 6 ನೇ ವಾರ್ಷಿಕೋತ್ಸವ ಹಾಗೂ ನಾಲ್ಕನೇ ಸನದು ದಾನ, ಅಲ್ ಮಾಜಿದಾ ಪದವಿ ಪ್ರದಾನ ಸಂಭ್ರಮ ಹಾಗೂ ಮೇಲಂತಸ್ತಿನ ಕಟ್ಟಡ ಉದ್ಘಾಟನಾ ಸಮಾರಂಭ ಅ19.ರಂದು ಸಂಸ್ಥೆಯ ಸ್ಥಾಪಕ ಕರಾಯ ಕಾಸಿಂ ಮದನಿಯವರ ಅಧ್ಯಕ್ಷತೆಯಲ್ಲಿ ಕರಾಯದಲ್ಲಿ ಜರಗಿತು.
ಶೈಖುನಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆ ನೆರವೇರಿಸಿದರು. ಬೆಳ್ತಂಗಡಿ ಸಂಯುಕ್ತ ಜಮಾಅತ್ ಅಧ್ಯಕ್ಷ ಸೆಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಮದನಿ ಉಜಿರೆ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿದರು. ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಲಸ ಮುಖ್ಯ ಪ್ರಭಾಷಣ ನಡೆಸಿ, ಕರಾಯ ಶರೀಅತ್ ಕಾಲೇಜಿನಲ್ಲಿ ಬಿರುದು ಪಡೆದು ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ನಡವಳಿಕೆ ಉತ್ತಮಗೊಳಿಸುವುದರೊಂದಿಗೆ ತಮ್ಮ ಸ್ನೇಹಿತರು, ಕುಟುಂಬಸ್ಥರು ಹಾಗೂ ಸಮಾಜಕ್ಕೆ ಉತ್ತಮ ಧಾರ್ಮಿಕ ಸಂದೇಶ ನೀಡುವ ವಿದ್ಯಾರ್ಥಿಗಳಾಗಬೇಕೆಂದು ಹಿತವಚನ ನೀಡಿದರು.
ವೇದಿಕೆಯಲ್ಲಿ ಜಂಯೀಯತುಲ್ ಉಲಮಾ ಮುಶಾವರ, ಸದಸ್ಯರಾದ ಹೈದರ್ ಮದನಿ ಉಸ್ತಾದ್ ಕರಾಯ, ಪಿ. ಕೆ. ಮುಹಮ್ಮದ್ ಮದನಿ ಉಸ್ತಾದ್ ಅಳಕೆ, ಶಾಫಿ ಸಖಾಫಿ ಉಸ್ತಾದ್ ಪಟ್ಟೂರು, ಉಮ್ಮರ್ ಕುಂಙ ಹಾಜಿ ನಾಡ್ಜೆ, ಉಜಿರೆ ಗ್ರಾಮ ಪಂಚಾಯಿತಿ ಸದಸ್ಯ ಅಯೂಬ್ ಕರಾಯ, ಝಕರಿಯಾ ಕರಾಯ, ಎಸ್ ಜೆ ಎಂ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿ ನೆಕ್ಕಿಲು ಉಪಸ್ಥಿತರಿದ್ದರು. ಕೆ ಎಂ ಜೆ ಜಿಲ್ಲಾ ಕಾರ್ಯದರ್ಶಿ ಜಿ ಎಂ ಕಾಮಿಲ್ ಸಖಾಫಿ ಉಸ್ತಾದ್ ಸ್ವಾಗತಿಸಿದರು. ಜಾಫರ್ ಸ ಅದಿ ಧನ್ಯವಾದ ಸಲ್ಲಿಸಿದರು.