ಕಸ್ತೂರಿ ರಂಗನ್ ವರದಿ ಜಾರಿ ವಿಚಾರಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ: ಹೊಸ ಸಮಿತಿ ಕಳುಹಿಸಲು ಕೋರಿಕೆ, ಕೇಂದ್ರದ ಬಳಿಗೆ ಸರ್ವ ಪಕ್ಷ ನಿಯೋಗ

0

ಬೆಳ್ತಂಗಡಿ: ಪಶ್ವಿಮಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶದ ಗ್ರಾಮಗಳ ಜನರ ಅಹವಾಲು ಆಲಿಸಲು ಹೊಸ ಸಮಿತಿ ಕಳುಹಿಸಿ ಕೊಡುವಂತೆ ಕೋರಲು ಕೇಂದ್ರದ ಬಳಿಗೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಲು ಸೆ.೨೦ರಂದು ಬೆಂಗಳೂರಿನಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆ ನಿರ್ಧರಿಸಿದೆ.
ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತು ಚರ್ಚೆ ನಡೆಸಲಾಗಿದೆ. ವರದಿ ತಿರಸ್ಕರಿಸುವುದೂ ಸೇರಿ ಮೂರು ಸಾಧ್ಯತೆಗಳನ್ನು ಒಳಗೊಂಡ ವರದಿ ಸಿದ್ಧಪಡಿಸಿ ಸಂಪುಟ ಸಭೆಯ ಮುಂದಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ನಿರ್ಣಯ ಆಧರಿಸಿ ಸೆ. ೨೭ರಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ತನ್ನ ಅಭಿಪ್ರಾಯ ಸಲ್ಲಿಸಲಿದೆ. ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಸಾಧ್ಯತೆಗಳ ಕುರಿತು ಪಶ್ವಿಮಘಟ್ಟ ವ್ಯಾಪ್ತಿಯ ೧೧ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಸರ್ಕಾರ ಗುರುವಾರ ಚರ್ಚೆ ನಡೆಸಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ವರದಿ ತಿರಸ್ಕರಿಸುವಂತೆ ಸಲಹೆ ನೀಡಿದ್ದರು. ಆದರೆ ಏಳನೇ ಬಾರಿಯೂ ಇದೇ ಕ್ರಮ ಅನುಸರಿಸಿದರೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಕೆಲ ಆಯ್ಕೆಗಳನ್ನು ಮುಂದಿಟ್ಟಿತ್ತು.
ಸಂಪುಟ ಉಪ ಸಮಿತಿ ಸಭೆಯಲ್ಲೂ ಆಯ್ಕೆಗಳ ಕುರಿತು ಚರ್ಚೆ ನಡೆಸಲಾಗಿದೆ. ಪರಿಸರಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುವ ೧,೪೩೩ ಗ್ರಾಮಗಳ ಜನರ ಅಹವಾಲು ಆಲಿಸಲು ನೇಮಿಸಲಾಗಿದ್ದ ಸಂಜಯ್ ಕುಮಾರ್ ನೇತೃತ್ವದ ಸಮಿತಿ ಇದುವರೆಗೂ ರಾಜ್ಯಕ್ಕೆ ಭೇಟಿ ನೀಡಿ ಜನರ ಅಹವಾಲು ನೇರವಾಗಿ ಆಲಿಸಿಲ್ಲ. ಹಾಗಾಗಿ ಬೇರೆ ಸಮಿತಿ ಕಳುಹಿಸಬೇಕು. ಅಲ್ಲಿಯವರೆಗೂ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ನೀಡಬೇಕು ಎಂದು ನಿಯೋಗ ಕೇಂದ್ರವನ್ನು ಕೋರಲಿದೆ.
ಮತ್ತೊಂದು ಆಯ್ಕೆಯಲ್ಲಿ ವನ್ಯಜೀವಿ ಸಂರಕ್ಷಿತ ಅರಣ್ಯ ಒಳಗೊಂಡ ೧೬,೧೧೪ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮದ ವ್ಯಾಪ್ತಿಗೆ ತರಲು ಒಪ್ಪಿಗೆ ನೀಡುವುದು, ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕೆಲವನ್ನು ಮತ್ತೆ ಕೈಬಿಡುವ ಅಥವಾ ವಿಶೇಷ ಪ್ಯಾಕೇಜ್ ಘೋಷಿಸುವ ವಿಚಾರಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸಂಪುಟದ ಮುಂದೆ ತರಲಾಗುತ್ತದೆ ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಮಂಕಾಳ ವೈದ್ಯ ಭಾಗಿಯಾಗಿದ್ದರು.
ದ.ಕ.ಜಿಲ್ಲೆಯ ೪೨ ಗ್ರಾಮಗಳನ್ನೂ ಒಳಗೊಂಡು ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶದ ೫೬,೮೦೦ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರಕಾರ ಐದನೇ ಕರಡು ಅಧಿಸೂಚನೆಯನ್ನು ಜುಲೈ ೩೧ರಂದು ಹೊರಡಿಸಿದೆ.
ಅಧಿಸೂಚನೆ ಪ್ರಸ್ತಾವಿಸಿದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗುಜರಾತ್‌ನ ೪೪೯ ಚದರ ಕಿ.ಮೀ., ಮಹಾರಾಷ್ಟ್ರದ ೧೭,೩೪೦ ಚದರ ಕಿ.ಮೀ., ಗೋವಾದ ೧,೪೬೧ ಚದರ ಕಿ.ಮೀ., ಕರ್ನಾಟಕದ ೨೦,೬೬೮ ಚದರ ಕಿ.ಮೀ.,ತಮಿಳುನಾಡಿನ ೬,೯೧೪ ಚದರ ಕಿ.ಮೀ., ಕೇರಳದ ೯,೯೯೩.೭ ಚದರ ಕಿ.ಮೀ. ಪ್ರದೇಶ ಒಳಗೊಂಡಿದೆ.
ಪಶ್ಚಿಮ ಘಟ್ಟಗಳಲ್ಲಿನ ಅಪರೂಪದ ಜೀವ ವೈವಿಧ್ಯ, ನದಿಗಳು, ನೈಸರ್ಗಿಕ ಸಂಪತ್ತು, ಅಪಾರ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುವ ಉzಶದಿಂದ ೫೯,೯೪೦ ಚ.ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಸಂರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ೨೦೧೩ರಲ್ಲಿ ವರದಿ ಸಲ್ಲಿಸಿತ್ತು. ಈ ಸಮಿತಿಯ ಶಿಫಾರಸಿಗಿಂತ ೩,೧೧೪ ಚ.ಕಿ.ಮೀನಷ್ಟು ಕಡಿಮೆ ಭೂ ಪ್ರದೇಶವನ್ನು ಹೊಸ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಆದರೆ, ಅದರ ಅಂತಿಮಗೊಳಿಸುವಿಕೆಯು ಪಶ್ಚಿಮ ಘಟ್ಟವನ್ನು ಹೊಂದಿರುವ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ. ಭೂಕುಸಿತ ಪೀಡಿತ ವಯನಾಡು ಜಿಲ್ಲೆಯ ಎರಡು ತಾಲ್ಲೂಕುಗಳ ೧೩ ಗ್ರಾಮಗಳನ್ನು ಒಳಗೊಂಡಂತೆ ಕೇರಳದ ೯,೯೯೩.೭ ಚದರ ಕಿ.ಮೀ ವಿಸ್ತೀರ್ಣದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಹರಡಿದ್ದು, ಅದರಲ್ಲಿ ೯,೧೦೭ ಚ.ಕಿ.ಮೀ ಅರಣ್ಯ ಪ್ರದೇಶ ಮತ್ತು ೮೮೬.೭ ಚ.ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ.
ಏನಿದು ಪರಿಸರ ಸೂಕ್ಷ್ಮ ಪ್ರದೇಶ: ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು. ಈ ಸಮಿತಿಯು ೨೦೧೧ ಆಗಸ್ಟ್ ೩೧ರಂದು ತನ್ನ ವರದಿ ನೀಡಿತ್ತು. ಈ ವರದಿಯು ಮಾಧವ ಗಾಡ್ಗೀಳ್ ವರದಿ ಎಂದೇ ಜನಪ್ರಿಯವಾಗಿದೆ. ಏಕೆಂದರೆ, ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ನೇತೃತ್ವದ ಸಮಿತಿ ನೀಡಿದ ವರದಿ ಇದಾಗಿತ್ತು. ಈ ವರದಿಯ ಪ್ರಕಾರ ಪಶ್ಚಿಮ ಘಟ್ಟದ ಶೇ. ೯೪ರಿಂದ ೯೭ರಷ್ಟು ಭೂ ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿತ್ತು. ಈ ಪ್ರದೇಶದಲ್ಲಿ ಜನವಸತಿಗೆ ನಿರ್ಬಂಧ ಹೇರಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಈ ವರದಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥ, ವಿಜ್ಞಾನಿ ಕಸ್ತೂರಿ ರಂಗನ್ ಅವರ ಸಾರಥ್ಯದಲ್ಲಿ ಮತ್ತೊಂದು ಸಮಿತಿ ರಚಿಸಿತ್ತು. ಈ ಸಮಿತಿಯು ಗಾಡ್ಗೀಳ್ ವರದಿಯಲ್ಲಿ ಇದ್ದಿರಬಹುದಾದ ಲೋಪ-ದೋಷಗಳನ್ನು, ಕುಂದುಕೊರತೆಗಳನ್ನು ನಿವಾರಿಸಿ ಒಂದು ವರದಿ ಸಿದ್ದಪಡಿಸಿ ೨೦೧೩ ಏಪ್ರಿಲ್ ೧೫ರಂದು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಕೇಂದ್ರವು ವರದಿಯನ್ನು ಸ್ವೀಕರಿಸಿತು. ಆದ್ರೆ ಇದೀಗ ಈ ವರದಿಯೂ ಜನರ ವಿರೋಧಕ್ಕೆ ಗುರಿಯಾಗಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಲಿದೆ.
ವರದಿ ಜಾರಿಯಾದರೆ?: ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ ೫೯,೯೪೯ ಸಾವಿರ ಚ,ಕಿ.ಮೀ.ವ್ಯಾಪ್ತಿಯ ಪ್ರದೇಶ(೩೬.೪೯%) ಇಕೋಸೆನ್ಸಿಟಿವ್ ಏರಿಯಾ(ಇಎಸ್‌ಎ)ಕ್ಕೆ ಒಳಪಟ್ಟು ನಿರ್ಬಂಧಿತವಾಗಿರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ ೫ ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು. ೨೦,೦೦೦ ಚ,ಮೀ, ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.ಇಎಸ್‌ಎನಿಂದ ೧೦ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗೆ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.
ಪರಿಣಾಮಗಳು: ಡಾ|ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಿದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಪ್ರದೇಶವನ್ನು ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುತ್ತದೆ. ಒಂದು ಬಾರಿ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದರೆ ಇಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ನಡೆಸುವಂತಿಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ತನ್ನ ಹತೋಟಿಯನ್ನು ಕಳೆದುಕೊಂಡು ಕೇಂದ್ರ ಸರ್ಕಾರದ ಸುಪರ್ದಿಗೆ ನೀಡಬೇಕಾಗುತ್ತದೆ.ಪಶ್ಚಿಮ ಘಟ್ಟದಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳು, ಗಿಡಮೂಲಿಕೆಗಳು, ವನ್ಯಜೀವಿಗಳು ಇರುವುದರಿಂದ ಇವುಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.ಅಲ್ಲದೆ ದಶಕಗಳಿಂದಲೂ ಅರಣ್ಯ ಪ್ರದೇಶದಲ್ಲಿರುವ ಆದಿವಾಸಿಗಳನ್ನು, ಯಾವುದೇ ಗ್ರಾಮವನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಅಲ್ಲದೆ ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು.
ಕೇಂದ್ರದಿಂದ ಬಂದಿತ್ತು ಐದನೇ ಅಧಿಸೂಚನೆ: ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿಯ ಮೊದಲ ಕರಡು ಅಧಿಸೂಚನೆ ಹೊರಡಿಸಿದ್ದು ೨೦೧೪ರ ಮಾ.೧೦ರಂದು.ನಂತರ ಎರಡನೇ ಕರಡು ಅಧಿಸೂಚನೆಯನ್ನು ೨೦೧೫ರ ಸೆ.೪ರಂದು ಹೊರಡಿಸಿತ್ತು. ಮೂರನೇ ಕರಡು ಅಧಿಸೂಚನೆಯನ್ನು ೨೦೧೭ರ ಫೆ.೨೭ರಂದು ಹೊರಡಿಸಿತ್ತು.ನಾಲ್ಕನೆ ಅಧಿಸೂಚನೆ ಹೊರಡಿಸಲಾಗಿ ಇದೀಗ ೫ನೇ ಅಧಿಸೂಚನೆ ಹೊರಬಿದ್ದಿದೆ. ಇಷ್ಟಾದರೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿಲ್ಲ. ಜನವಿರೋಧ ಕಟ್ಟಿಕೊಳ್ಳುವ ಬದಲು ೫೪೫ ದಿನಗಳ ಗಡುವು ಸಮೀಪಿಸುತ್ತಿದ್ದಂತೆ ಹೊಸ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ. ಆದರೆ ವರದಿ ಜಾರಿಗೆ ವಿಪಕ್ಷಗಳ ಅಧಿಕಾರವಿರುವ ರಾಜ್ಯ ಸರಕಾರಗಳು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸುತ್ತಲೇ ಬಂದಿವೆ. ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಸಮಿತಿ ರಚಿಸಿ,ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಬಾರದು, ಮಾಡಿದರೂ ಜನಪರವಾದ ಹಲವು ಮಾರ್ಪಾಟುಗಳನ್ನು ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ತಿಳಿಸಿತ್ತು.ಕಸ್ತೂರಿರಂಗನ್ ವರದಿಗೂ ದ.ಕ.ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಬಿ.ರಮಾನಾಥ ರೈಯವರು ಅರಣ್ಯ ಸಚಿವರಾಗಿದ್ದಾಗ, ಜನ ವಸತಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಿ, ಆ ವರದಿಯ ಕೆಲವೊಂದು ಅಂಶಗಳನ್ನು ಕೈಬಿಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.ಪರಿಸರ ಸೂಕ್ಷ್ಮವಲಯ ವ್ಯಾಪ್ತಿ ಮರುನಿಗದಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಪ್ರಸ್ತುತ ರಾಜ್ಯ ಸರಕಾರ ಸಿದ್ದತೆ ನಡೆಸಿತ್ತು.ಈ ನಡುವೆ,ಕೇರಳದ ವಯನಾಡಿನಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ದುರಂತದ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ಕಸ್ತೂರಿರಂಗನ್ ವರದಿ ಜಾರಿ ಕುರಿತು ಐದನೇ ಬಾರಿಗೆ ಅಧಿಸೂಚನೆ ಹೊರಡಿಸಿದೆ.
ರಾಜ್ಯದ ನಿಲುವಿಗಾಗಿ ಬಾಧ್ಯಸ್ಥರ ಸಭೆ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಕೇಂದ್ರ ಸರಕಾರ ಆ.೨ರಂದು ೬ನೇ ಅಧಿಸೂಚನೆ ಹೊರಡಿಸಿದ್ದು ಈ ಮಾಸಾಂತ್ಯದೊಳಗೆ ರಾಜ್ಯ ಸರಕಾರದ ನಿಲುವು ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ೧೧ ಜಿಲ್ಲೆಗಳ ಜನಪ್ರತಿನಿಧಿಗಳ(ಬಾಧ್ಯಸ್ಥರ) ಸಭೆ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಬಿ.ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಸೆ.೧೯ರಂದು ನಡೆಯಿತು. ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ ೧೬,೧೧೪ ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶವನ್ನು ಈಗಾಗಲೇ ಸಂರಕ್ಷಿಸಲಾಗಿದ್ದು, ಈ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್ ವರದಿಯನ್ನು ಸಮ್ಮತಿಸಬಹುದು ಎಂಬ ಸಲಹೆಯನ್ನು ಸಚಿವ ಈಶ್ವರ್ ಖಂಡ್ರೆ ನೀಡಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಕುರಿತು ವಿವರ ನೀಡಿದರು. ಸಭೆಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ೧೧ ಜಿಲ್ಲೆಗಳ ಸಚಿವರ, ಶಾಸಕರ ಮತ್ತು ಸಂಸತ್ ಸದಸ್ಯರ ಅಭಿಪ್ರಾಯ ಪಡೆಯಲಾಗಿದೆ.ಆ ಎಲ್ಲ ಅಭಿಪ್ರಾಯವನ್ನು ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ, ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ, ಸಂಪುಟದ ಅನುಮೋದನೆ ಪಡೆದು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಖಂಡ್ರೆ ಹೇಳಿದರು.
ಹಲವು ಜನಪ್ರತಿನಿಧಿಗಳು ಈಗಾಗಲೇ ರಾಜ್ಯದಲ್ಲಿ ೧೬,೧೧೪ ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಇದ್ದು, ಇನ್ನು ಹೆಚ್ಚಳ ಮಾಡಿದರೆ ಅರಣ್ಯದಂಚಿನ ಜನರ ಬದುಕೇ ದುಸ್ತರವಾಗುತ್ತದೆ.ಹೀಗಾಗಿ ಬಫರ್ ವಲಯವನ್ನು ಶೂನ್ಯಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಹಾಲಿ ಇರುವ ೧೬,೧೧೪ ಚ.ಕಿ.ಮೀ. ಮಿತಿಗೆ ನಾವು ಸಮ್ಮತಿಸಿದರೆ ಶೂನ್ಯ ಬಫರ್ ಆಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ ೨೦,೬೬೮ ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ.ಈ ಬಗ್ಗೆ ಭೌತಿಕ ಸರ್ವೆ ನಡೆಸಿದರೆ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನೂ ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಖಂಡ್ರೆ ಹೇಳಿದರು.
ಹಲವು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲೇ ಜೀವನ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುವುದು ಸೂಕ್ತವಲ್ಲ. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿದರೂ ಅವರು ಅಲ್ಲಿಗೆ ಹೋಗುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ನಾಳೆಯ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ವಿಶೇಷ ಪ್ಯಾಕೇಜ್‌ಗೆ ಆಗ್ರಹ: ಈಗಾಗಲೇ ಇರುವ ೧೬,೧೧೪ ಚ.ಕಿ.ಮೀ ಪ್ರದೇಶಕ್ಕೆ ಅಂಗೀಕಾರ ನೀಡಿದರೂ ಈ ಪ್ರದೇಶದಲ್ಲಿರುವ ೧೫೭೬ ಗ್ರಾಮಗಳ ಜನರ ಜೀವನೋಪಾಯಕ್ಕೆ ಅನಾನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಒತ್ತಾಯ ಮಾಡಬಹುದು ಎಂದು ತಾವು ಸಲಹೆ ನೀಡಿರುವುದಾಗಿ ಅವರು ತಿಳಿಸಿದರು.
ಪಶ್ಚಿಮ ಘಟ್ಟ ಕೇವಲ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಘಟ್ಟ ಪ್ರದೇಶ ಹಲವು ನದಿಗಳ ಉಗಮ ಸ್ಥಾನವಾಗಿದೆ. ಮಿಗಿಲಾಗಿ ಮಳೆಯ ಮಾರುತಗಳನ್ನು ತಡೆಯುವ ಕಾರಣ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ.ಹೀಗಾಗಿ ಈ ಪಶ್ಚಿಮಘಟ್ಟ ಸಂರಕ್ಷಣೆಯ ಹೊಣೆ ಕೇಂದ್ರದ್ದೂ ಆಗಿದೆ.ಆದ ಕಾರಣ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಈಶ್ವರ್ ಖಂಡ್ರೆ ಹೇಳಿದರು.
ಒತ್ತುವರಿ ತೆರವಿನ ಬಗ್ಗೆ ಸ್ಪಷ್ಟೀಕರಣ: ಒತ್ತುವರಿ ತೆರವಿನ ಬಗ್ಗೆ ತಾವು ನೀಡಿರುವ ಟಿಪ್ಪಣಿಗಳು ಸ್ಪಷ್ಟವಾಗಿವೆ. ೨೦೧೫ರ ನಂತರದ ಒತ್ತುವರಿ ಮಾತ್ರ ತೆರವು ಮಾಡಲು ಸೂಚಿಸಲಾಗಿದೆ. ಜೊತೆಗೆ ೨೦೧೫ರ ಸರಕಾರದ ಆದೇಶ ಮತ್ತು ನಡವಳಿಯಂತೆ ೩ ಎಕರೆಗಿಂತ ಮೇಲ್ಪಟ್ಟ ದೊಡ್ಡ ಒತ್ತುವರಿ ತೆರವು ಮಾಡಲಾಗುತ್ತಿದ್ದು ಬಡ ರೈತರ ಒತ್ತುವರಿಯನ್ನು (ಪಟ್ಟಾಭೂಮಿ ಮತ್ತು ಒತ್ತುವರಿ ಸೇರಿ ೩ ಎಕರೆ) ತೆರವು ಮಾಡಿಸುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿzನೆ ಎಂದು ಅವರು ಹೇಳಿದರು.ಶೃಂಗೇರಿ ಶಾಸಕ ರಾಜೇಗೌಡರು ೩ ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವವರ ಜೀವನೋಪಾಯಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಲು ಮನವಿ ಮಾಡಿದ್ದಾರೆ ಎಂದೂ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಬಾಧ್ಯಸ್ಥರ ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಡಾ|ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ವಿಧಾನಪರಿಷತ್ ಉಪ ಸಭಾಪತಿ ಪ್ರಾಣೇಶ್, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಶಾಸಕರಾದ ಆರಗ ಜ್ಞಾನೇಂದ್ರ, ನಯನಾ ಮೋಟಮ್ಮ, ರಾಜೇಗೌಡ, ಹರೀಶ್ ಪೂಂಜ,ಸಂಸದ ಶ್ರೇಯಸ್ ಪಟೇಲ್ ಮತ್ತಿತರರು ಪಾಲ್ಗೊಂಡಿದ್ದರು.
ದ.ಕ ಜಿಲ್ಲೆಯ ಪ್ರಸ್ತಾವಿತ ಗ್ರಾಮಗಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಬ ತಾಲೂಕಿನ ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಸಿರಿಬಾಗಿಲು, ಕೊಂಬಾರು, ಇಚ್ಲಂಪಾಡಿ, ಬಲ್ಯ, ಬಿಳಿನೆಲೆ, ದೋಳ್ಪಾಡಿ, ಬಳ್ಪ, ಏನೆಕಲ್ಲು, ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ನಾಲ್ಕೂರು, ಕೂತ್ಕುಂಜ, ಐನೆಕಿದು, ದೇವಚಳ್ಳ, ಹರಿಹರ ಪಲ್ಲತಡ್ಕ, ಮಿತ್ತೂರು, ಬಾಳುಗೋಡು, ಮಡಪ್ಪಾಡಿ, ಉಬರಡ್ಕ, ಕಲ್ಮಕಾರು, ಅರಂತೋಡು, ಆಲೆಟ್ಟಿ, ಸಂಪಾಜೆ,ತೊಡಿಕಾನ, ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿ ಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ, ರೆಖ್ಯಾ ಗ್ರಾಮಗಳನ್ನು ಅತೀ ಸೂಕ್ಷ್ಮ ಪ್ರದೇಶಗಳೆಂದು ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಲಾಗಿದೆ.ಒಂದು ವೇಳೆ ವರದಿ ಜಾರಿಯಾದರೆ ಈ ಗ್ರಾಮಗಳ ವ್ಯಾಪ್ತಿಯಿಂದ ಕೆಲವು ಕಿ.ಮೀ.ಗಳ ದೂರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ.

ಬೆಳ್ತಂಗಡಿ ತಾಲೂಕಿನ ಜನತೆಗೆ ಆತಂಕ
ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ, ರೆಖ್ಯಾ ಗ್ರಾಮಗಳನ್ನು ಅತೀ ಸೂಕ್ಷ್ಮ ಪ್ರದೇಶಗಳೆಂದು ಕಸ್ತೂರಿ ರಂಗನ್ ವರದಿಯಲ್ಲಿ ಗುರುತಿಸಲಾಗಿದೆ. ಒಂದು ವೇಳೆ ವರದಿ ಜಾರಿಯಾದರೆ ಈ ಗ್ರಾಮಗಳ ವ್ಯಾಪ್ತಿಯಿಂದ ಕೆಲವು ಕಿ.ಮೀ.ಗಳ ದೂರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ. ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಠಿಸಿದೆ.

LEAVE A REPLY

Please enter your comment!
Please enter your name here