ಪಟ್ರಮೆ: ಗಣೇಶೋತ್ಸವ ಸಮಿತಿಯು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಚೌತಿ ಮಾಡಲು ಸೀಮಿತವಾಗಿರದೆ ಹಿಂದುತ್ವದ ಉಳಿವಿಗಾಗಿ ಮತ್ತು ಹಿಂದುತ್ವದ ಜಾಗರಣೆಗಾಗಿ ನಿರಂತರ ಕಾರ್ಯ ಕೈಗೊಳ್ಳುವಂತಾಗಬೇಕು. ಜಾತಿ- ಮತ- ಧರ್ಮಗಳನ್ನು ಒಂದುಗೂಡಿಸುವ ಶಕ್ತಿ ಗಣೇಶೋತ್ಸವಕ್ಕೆ ಇದೆ. ಆಂಗ್ಲ ಭಾಷಾ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸಂಸ್ಕೃತಿಯನ್ನೇ ಹಾಳು ಮಾಡುವಂತಹ ಶಿಕ್ಷಣ ವ್ಯವಸ್ಥೆಗೆ ಪೋಷಕರು ತಮ್ಮ ಮಕ್ಕಳನ್ನು ಬಲಿಯಾಗಿಸುತ್ತಿರುವುದು ಸಮಾಜಕ್ಕೆ ಮಾರಕ ಎಂದು ಪಾವಂಜೆ ಮೇಳದ ಯಕ್ಷಗಾನ ಕಲಾವಿದ, ಖ್ಯಾತ ವಾಗ್ಮಿ ದಿನೇಶ್ ಶೆಟ್ಟಿ ಕಾವಳಕಟ್ಟೆ ನುಡಿದರು.
ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಪೂಜಿಸಲ್ಪಟ್ಟ 40ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಸಂಸ್ಕಾರ ನೀಡುವ ಶಿಕ್ಷಣಕ್ಕೆ ಒತ್ತು ಕೊಡಬೇಕು. ಸಂಸ್ಕಾರಯುತ ಶಿಕ್ಷಣ ಸಿಕ್ಕಾಗ ಮಾತ್ರ ಆತ ಎಲ್ಲಾ ಭಾಷೆಯನ್ನು ಮೀರಿ ಬೆಳೆಯಬಲ್ಲ ಎಂದರು.ಸಭಾಧ್ಯಕ್ಷತೆಯನ್ನು ಪಟ್ರಮೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ ಶಬರಾಯ ವಹಿಸಿದ್ದರು.
ವೇದಿಕೆಯಲ್ಲಿ ಕೊಕ್ಕಡ ಪ್ಯಾಕ್ಸ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಜೆ, ಶ್ರೀರಾಮ ವಿದ್ಯಾ ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಭಟ್ ಕಳಂದೂರು ಉಪಸ್ಥಿತರಿದ್ದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರವಿಚಂದ್ರ ಪುಡ್ಕೆತ್ತೂರು ಸ್ವಾಗತಿಸಿದರು, ಸಮಿತಿಯ ಸದಸ್ಯ ಜಯಾನಂದ ಕೊಡೆಂಚಡ್ಕ ವಂದಿಸಿದರು. ಕಿರಣ್ ಕೊಡೆಂಚಡ್ಕ ವರದಿ ವಾಚಿಸಿದರು. ಸಮಿತಿಯ ಕಾರ್ಯದರ್ಶಿ ಧರ್ಣಪ್ಪ ಮೊಟ್ಟಿಕಲ್ಲು ಕಾರ್ಯಕ್ರಮ ನಿರೂಪಿಸಿದರು.
ಶೈಕ್ಷಣಿಕ ವರ್ಷ 2023 24ನೇ ಸಾಲಿನ 7ನೇ ತರಗತಿಯಲ್ಲಿ ಕಲಿಕೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶಾಲಾ ವಿದ್ಯಾರ್ಥಿ ಸಮರ್ಥ ವಿನಯ್ ಇವನಿಗೆ ಊರ ವಿದ್ಯಾ ಪೋಷಕರಾದ ಹರಿರಾವ್ ಮರ್ಲಾಜೆ ಇವರ ವತಿಯಿಂದ ವಿದ್ಯಾ ಪ್ರೋತ್ಸಾಹವಾಗಿ ವಾಚ್ ಬಹುಮಾನವಾಗಿ ನೀಡಲಾಯಿತು. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಭಟ್ ಕಳಂದೂರುರವರು ತಮ್ಮ ತಂದೆಯ ಸ್ಮರಣಾರ್ಥ 7ನೇ ತರಗತಿಯಲ್ಲಿ ವಿಷಯವಾರು ಹೆಚ್ಚು ಅಂಕ ಗಳಿಸಿದ ಸಮರ್ಥ ವಿನಯ್ ಹಾಗೂ ಅನಿರುದ್ಧ ನಿಗೆ ಪ್ರೋತ್ಸಾಹ ಬಹುಮಾನ ನೀಡಿದರು. ಈ ಸಂದರ್ಭ ದೈವರಾದನೆಯ ಪರಿಚಾಲಕ ಆನಂದ ಗೌಡ ಅಲಂಗೂರು ಹಾಗೂ ಆರೋಗ್ಯ ಶುಶ್ರೂಕಿಯ ಸಹಾಯಕಿ ಸುಂದರಿ ಪಿತ್ತಿಲ್ ತ್ತಾರ್ ರವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.