ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗೆ ಆಶ್ರಯ ನೀಡಿದ್ಧ ಇಬ್ಬರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ- ಪಡಂಗಡಿಯ ನೌಷಾದ್ ಪತ್ತೆಗೆ ವಿವಿಧೆಡೆ ಶೋಧ- ಮುಂದುವರಿಸಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು

0

ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾ ಮುಖಂಡರಾಗಿದ್ದ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು(೩೪ವ)ರವರ ಹತ್ಯೆ ಪ್ರಕರಣದ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.
ಭಯ ಹುಟ್ಟಿಸುವ ಉzಶದಿಂದ ಕೊಲೆ ಮಾಡಲಾಗಿತ್ತು: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅವರದೇ ಮಾಲಕತ್ವದ ಅಕ್ಷಯ್ ಚಿಕನ್ ಸೆಂಟರ್ ಮುಂಭಾಗದಲ್ಲಿ ೨೦೨೨ರ ಜು.೨೬ರಂದು ರಾತ್ರಿ ೮ ಗಂಟೆ ವೇಳೆಗೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜನರಲ್ಲಿ ಭಯ ಹುಟ್ಟಿಸುವ ಉzಶದಿಂದ ಸಾರ್ವಜನಿಕ ಸ್ಥಳದಲ್ಲಿ ಹರಿತವಾದ ಆಯುಧಗಳಿಂದ ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಕೊಲೆಗೈಯ್ಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ೧೯ ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು ತಲೆ ಮರೆಸಿಕೊಂಡಿರುವ ೭ ಮಂದಿಯ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಿವಿಧೆಡೆ ಶೋಧ ಮುಂದುವರಿಸುತ್ತಿದ್ದಾರೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯದಲ್ಲಿ ಪಿಎಫ್‌ಐ ಸೇವಾ ತಂಡದ ಮಾಸ್ಟರ್ ತರಬೇತುದಾರನಾಗಿದ್ದ ಸುಳ್ಯ ತಾಲೂಕಿನ ಶಾಂತಿನಗರದ ಮುಸಫಾ ಪೈಚಾರ್‌ಗೆ ತಲೆ ಮರೆಸಿಕೊಳ್ಳಲು ಆಶ್ರಯ ನೀಡಿದ ಆರೋಪದಲ್ಲಿ ಮನ್ಸೂರ್ ಪಾಷಾ ಮತ್ತು ರಿಯಾಜ್ ಎಚ್.ವೈ. ವಿರುದ್ಧ ಎನ್‌ಐಎ ಅಧಿಕಾರಿಗಳು ಇದೀಗ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್‌ನನ್ನು ಹಾಸನ ಜಿಲ್ಲೆಯ ಸಕಲೇಶಪುರದ ಆನೆಮಹಲ್ ಎಂಬಲ್ಲಿ ಆತನಿಗೆ ಆಶ್ರಯ ನೀಡಿದ್ದ ಆರೋಪಿ ಮನ್ಸೂರ್ ಪಾಷಾ ಜೊತೆಗೆ ಕಳೆದ ಮೇ ೧೦ರಂದು ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿ ರಿಯಾರh ಎಚ್.ವೈ. ಎಂಬಾತ ದೇಶಬಿಟ್ಟು ವಿದೇಶಕ್ಕೆ ಪರಾರಿಯಾಗುವ ಪ್ರಯತ್ನದಲ್ಲಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಳೆದ ಜೂ.೩ರಂದು ಎನ್‌ಐಎ ಬಂಧಿಸಿತ್ತು. ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ ಆರೋಪಿಗಳಿಬ್ಬರ ವಿರುದ್ಧವೂ ಸೆಕ್ಷನ್ಸ್ ೧೨೦ ಬಿ ಮತ್ತು ೨೧೨ ಐಪಿಸಿ ಮತ್ತು ಸೆಕ್ಷನ್ ೧೯ ಯುಎ(ಪಿ)ಕಾಯ್ದೆಯಡಿ ಇದೀಗ ಎನ್‌ಐಎ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಒಟ್ಟು ೨೬ ಮಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದು ೧೯ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಪರಾರಿಯಾಗಿರುವ ೭ ಮಂದಿ ಆರೋಪಿಗಳಿಗಾಗಿ ಎನ್‌ಐಎ ಹುಡುಕಾಟ ಮುಂದುವರಿಸಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಬಂಧಿತರ ಪೈಕಿ ಕೆಲವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ.
ಎನ್‌ಐಎ ಪ್ರಕರಣ ದಾಖಲಿಸಿಕೊಂಡು ಎರಡು ವರ್ಷ ಪೂರ್ಣ: ಪ್ರವೀಣ್ ನೆಟ್ಟಾರು ಅವರನ್ನು ೨೦೨೨ರ ಜುಲೈ ೨೬ರಂದು ರಾತ್ರಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಈ ಕುರಿತು ಬೆಳ್ಳಾರೆ ಠಾಣೆ ಪೊಲೀಸರು ಜು.೨೭ರಂದು ಕೊಲೆ ಪ್ರಕರಣ (೬೩/೨೦೨೨)ದಾಖಲಿಸಿಕೊಂಡಿದ್ದರು. ಆ ಬಳಿಕ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಲಾಗಿತ್ತು. ಬಳಿಕ ಎನ್‌ಐಎಯವರು ೨೦೨೨ರ ಆಗಸ್ಟ್ ೪ರಂದು ಯುಎ(ಪಿ) ಮತ್ತು ಐಪಿಸಿಯಡಿ ಮರು ಪ್ರಕರಣ ದಾಖಲಿಸಿಕೊಂಡಿದ್ದರು. ಎನ್‌ಐಎ ಪ್ರಕರಣ ದಾಖಲಿಸಿಕೊಂಡು ಇದೀಗ ಎರಡು ವರ್ಷ ಪೂರ್ಣಗೊಂಡಿದೆ.
ಪಡಂಗಡಿಯ ನೌಷಾದ್ ಪತ್ತೆಗೆ ಶೋಧ:
ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆಯ ಹಮೀದ್‌ರವರ ಪುತ್ರ ನೌಷದ್ (೩೨ವ) ಎಂಬಾತನ ಪತ್ತೆಗೆ ರಾಷ್ಟ್ರೀಯ ತನಿಖಾದಳ ಶೋಧ ಮುಂದುವರಿಸಿದೆ. ನೌಷಾದ್ ಕುರಿತು ಮಾಹಿತಿ ನೀಡಿದವರಿಗೆ ೨ ಲಕ್ಷ ರೂ ಬಹುಮಾನ ಘೋಷಿಸಿದ್ದ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಆತನನ್ನು ಬಂಧಿಸಲು ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನೇರ ಆರೋಪಿಗಳಾದ ಶಿಯಾಬ್ ನಾವೂರು, ಬಶೀರ್ ಎಲಿಮಲೆ, ರಿಯಾಜ್ ಅಂಕತಡ್ಕ, ಕೊಲೆಗೆ ಸಂಚು ರೂಪಿಸಿದ ಆರೋಪಿಗಳಾದ ಮಹಮ್ಮದ್ ಮುಸ್ತಫ ಪೈಚಾರು, ತುಫೈಲ್ ಮಡಿಕೇರಿ ಮತ್ತು ಕೊಲೆಗೆ ನೆರವು ನೀಡಿದ ಆರೋಪಿಗಳಾದ ಶಫೀಕ್ ಬೆಳ್ಳಾರೆ, ಝಕೀರ್ ಸವಣೂರು, ಹಾರಿಸ್ ಪಳ್ಳಿಮಜಲು, ನೌಫಲ್ ಗೌರಿಹೊಳೆ, ಆಬಿದ್ ನಾವೂರು, ಜಟ್ಟಿಪಳ್ಳದ ಅಬ್ದುಲ್ ಕಬೀರ್, ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ, ಇಬ್ರಾಹಿಂ ಷಾ, ಸದ್ದಾಂ ಪಳ್ಳಿಮಜಲು, ಶಾಹಿದ್ ಬೆಳ್ಳಾರೆ, ಜಾಬಿರ್ ಅರಿಯಡ್ಕ ಹಾಗೂ ಮನ್ಸೂರ್ ಪಾಷಾರವರು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿದ್ದಿಕ್ ಬೆಳ್ಳಾರೆ, ಉಮ್ಮರ್ ಫಾರೂಕ್ ಕಲ್ಲುಮುಟ್ಟು, ಮಸೂದ್ ಅಗ್ನಾಡಿ ಉಪ್ಪಿನಂಗಡಿ, ಅಶ್ರಫ್ ಕೊಡಾಜೆ, ಅಬ್ದುಲ್ ನಾಸಿರ್ ಸೋಮವಾರಪೇಟೆ, ಅಬ್ದುಲ್ ರಹಿಮಾನ್ ಸೋಮವಾರಪೇಟೆ ಹಾಗೂ ನೌಶಾದ್ ಪಡಂಗಡಿ ಬೆಳ್ತಂಗಡಿ ಎಂಬವರನ್ನು ಬಂಧನಕ್ಕಾಗಿ ಹುಡುಕಲಾಗುತ್ತಿದೆ.
ನೌಷಾದ್ ಮನೆಗೆ ದಾಳಿ ನಡೆಸಿದ್ದ ಎನ್‌ಐಎ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿ ನಂಬರ್ ೨೩ ಆಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆಯ ಹಮೀದ್ ಎಂಬವರ ಪುತ್ರ ನೌಷದ್ (೩೨ವ) ಪತ್ತೆಗೆ ನೊಟೀಸ್ ಜಾರಿಗೊಳಿಸಲಾಗಿದ್ದು ಆತನ ಕುರಿತು ಸುಳಿವು ನೀಡಿದವರಿಗೆ ಎನ್‌ಐಎ ತಲಾ ೨ ಲಕ್ಷ ರೂ ಬಹುಮಾನ ಘೋಷಿಸಿತ್ತು. ಪಡಂಗಡಿಯ ಪೊಯ್ಯೆಗುಡ್ಡೆ ನಿವಾಸಿ ನೌಷಾದ್ ಮನೆಗೆ ಈ ಹಿಂದೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿ ನೊಟೀಸ್ ಜಾರಿಗೊಳಿಸಿದ್ದರು. ಕೊಲೆ ಪ್ರಕರಣ ನಡೆದ ಬಳಿಕ ನೌಷಾದ್ ನಾಪತ್ತೆಯಾಗಿರುವುದು ಅಧಿಕಾರಿಗಳ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನ ಪತ್ತೆಗಾಗಿ ಎನ್‌ಐಎ ಬಲೆ ಬೀಸಿದೆ. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಕರ್ನಾಟಕ ಪೊಲೀಸರು ನಡೆಸುತ್ತಿದ್ದರು. ಬಳಿಕ ವ್ಯಾಪಕ ಆಗ್ರಹ ಮತ್ತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಿನ ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲಾಗಿತ್ತು. ನಂತರ ಕಾನೂನು ಬಾಹಿರ ಕೃತ್ಯ ಎಸಗುತ್ತಿರುವ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು.

p>

LEAVE A REPLY

Please enter your comment!
Please enter your name here