ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 7ರಂದು ಶಾಲಾ ಮಟ್ಟದ ಪ್ರತಿಭಾ ಕಾರಂಜಿಯು ನಡೆಯಿತು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಬೆನೆಡಿಕ್ಟ ಡಿಸಿಲ್ವರವರು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹದೊಂದಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷ ಶಾಲಾ ಸಂಚಾಲಕರು ಅತೀ ವಂ.ಫಾ.ವಾಲ್ಟರ್ ಓಸ್ವಲ್ಡ್ ಡಿಮೆಲ್ಲೋ ರವರು ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಬಾಚಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ವಂ.ಫಾ.ಕ್ಲಿಫರ್ಡ್ ಪಿಂಟೋರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಗಳ ನಿಯಮಗಳನ್ನು ತಿಳಿಸಿದರು.
ತೀರ್ಪುಗಾರರಾದ ಸುರೇಶ್ ಎ ಡಿ, ನಿಶಾ ಭಟ್, ಮಂಜುನಾಥ್, ಬ್ರದರ್ ಆಲ್ರಿಕ್ ಗ್ಸೇವಿಯರ್, ಅಶ್ರಫ್ ಉಪಸ್ಥಿತರಿದ್ದರು. ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳಾದ ರೇಹಾಂತ್ ಎಂ ಅತಿಥಿ ಪರಿಚಯ ಮಾಡಿದರು. ವೀವನ್ ಪಿಂಟೋ ಸ್ವಾಗತಿಸಿ, ಪೃಥ್ವಿ ಪಿ ವಿ ವಂದಿಸಿದರು. ಆಲ್ಸ್ಟನ್ ಡಿಸಿಲ್ವ ಕಾರ್ಯಕ್ರಮ ನಿರ್ವಹಿಸಿದರು.ಸಹಶಿಕ್ಷಕಿಯರಾದ ವಿನಿತಾ ಮೋರಸ್, ಲೋನ ಲೋಬೋ, ಸುಮಿತ್ರ ಬಿ.ಎಲ್ ಸಹಕರಿಸಿದರು.