ಪಟ್ರಮೆ: ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖನಾದ ಶಿವಾಜಿಯು ತನ್ನ 19ನೇ ವಯಸ್ಸಿನಲ್ಲಿ ಯುದ್ದ ತಂತ್ರಗಳನ್ನು ಅರಿತು ರಣಾಂಗಣದಲ್ಲಿ ಸ್ವತಃ ಹೋರಾಡುತ್ತಿದ್ದ ಧೀರನಾಗಿದ್ದನು. ಶಿವಾಜಿಯ ಸಾಹಸಗಾಥೆ ಇಂದಿನ ಮಕ್ಕಳಿಗೆ ಸ್ಪೂರ್ತಿದಾಯಕವಾಗಿದ್ದು ಪ್ರತಿಯೊಬ್ಬರೂ ಕೂಡ ಶಿವಾಜಿಯ ಬಾಲ್ಯ, ಯೌವನ, ಯಶೋಗಾಥೆಯನ್ನು ತಿಳಿದುಕೊಳ್ಳಬೇಕಾದದ್ದು ಅವಶ್ಯಕ. ಕಳೆದುಕೊಂಡ ಎಲ್ಲಾ ಕೋಟೆಗಳನ್ನು ಮೊಘಲ್ ನಿಂದ ವಶಪಡಿಸಿಕೊಂಡ ನಂತರ ರಾಯಗಡದಲ್ಲಿ ಜೂನ್ 19ರಂದು ಶಿವಾಜಿಯ ಪಟ್ಟಾಭಿಷೇಕ ನಡೆಯಿತು.
ಈ ಸಂದರ್ಭ ಛತ್ರಪತಿ ಎಂದು ಬಿರುದಾಂಕಿತನಾದ ಆತ ತನ್ನ ರಾಜ್ಯವನ್ನು ಹಿಂದವೀ ಸ್ವರಾಜ್ ಎಂದು ಕರೆದ. ಛತ್ರಪತಿ ಶಿವಾಜಿ ಯುವಕರಿಗೆ ಸ್ಪೂರ್ತಿ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘದ ಉಜಿರೆಯ ಶಾರೀರಿಕ ಪ್ರಮುಖ್ ತಿಲಕ್ ಅನಾರು ನುಡಿದರು.ಉತ್ತಮ ಗುಣನಡತೆಯನ್ನು ಹೊಂದಿದ್ದ ಶಿವಾಜಿಯು ಪರಧರ್ಮ ಸಹಿಷ್ಣುವಾಗಿದ್ದ. ಗೆರಿಲ್ಲ ಯುದ್ಧ ತಂತ್ರವನ್ನು ಅರಿತಿದ್ದ ಶಿವಾಜಿ ಓರ್ವ ಆದರ್ಶ ಪುರುಷ ಎಂದರು.ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ನಡೆದ ಹಿಂದೂ ಸಾಮ್ರಾಜ್ಯೋತ್ಸವದಲ್ಲಿ ಅವರು ಬೌದ್ಧಿಕ್ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಸಮಿತಿ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮಾತನಾಡಿ, ವಿದ್ಯಾರ್ಥಿಗಳು ಶಿವಾಜಿಯ ಜೀವನ ಸಾಧನೆ ಬಗ್ಗೆ ಯೋಜನಾ ಕಾರ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಛತ್ರಪತಿ ಶಿವಾಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಸರಸ್ವತಿ ವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಸ್ವಾಗತಿಸಿ, ಸಹ ಶಿಕ್ಷಕಿ ಸ್ವಾತಿ ಕೆ.ವಿ ವಂದಿಸಿದರು.