ಗುರುವಾಯನಕೆರೆ: ರಾಜಧಾನಿ ಬೆಂಗಳೂರಿನಲ್ಲಿ ಮೇ.02ರಂದು ನಾಗರಬಾವಿ ಲಗ್ಗೆರೆಯ ಸಮೀಪ ಶ್ರೀ ಸ್ವಸ್ತಿಕ ಜ್ಯೋತಿಷ್ಯಾಲಯ ಶಾಖೆಯನ್ನು ಪ್ರಖ್ಯಾತ ನಾಡೋಜ ಡಾ.ಹಂಪನಾ ನಾಗರಾಜ ಹಾಗೂ ಸಮಾಜ ಸೇವಕ ಸಾಮಾಜಿಕ ಹೋರಾಟಗಾರ ಮಾಳ ಹರ್ಷೇಂದ್ರ ಜೈನ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಜ್ಯೋತಿಷ್ಯ ಪಂಡಿತರಾದ ಬಿ.ಕೆ.ಸುಬಾಷ್ ಚಂದ್ರ ಜೈನ್ ರವರು ಹಲವಾರು ಸಮಾಜದ ಗಣ್ಯ ಮುಖಂಡರ ಉಪಸ್ಥಿತಿಯಲ್ಲಿ ಸರಳವಾಗಿ ಉದ್ಘಾಟನೆಗೊಂಡಿತು.
ಡಿಜಿಟಲ್ ಯುಗದ ಈ ದಿನಗಳಲ್ಲಿಯೂ ಕೂಡ ಜ್ಯೋತಿಷ್ಯ ಶಾಸ್ತ್ರ ಸಾರ್ವಜನಿಕ ಜನರ ಜೀವನದ ಒಂದು ಪ್ರಮುಖ ಅಂಗವಾಗಿದ್ದು, ಇದರ ಸದುಪಯೋಗವನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನತೆ ಉಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸಲಿ ಹಾಗೂ ಜ್ಯೋತಿಷ್ಯವನ್ನು ನಂಬಿ ಬರುವ ಬಂಧುಗಳಿಗೆ ಜ್ಯೋತಿಷ್ಯ ಪಂಡಿತರಾದ ಬಿಕೆ ಸುಬಾಷ್ ಚಂದ್ರ ಜೈನ್ ರವರು ಸದಾ ಹಸನ್ಮುಖ ಮತ್ತು ನೇರನುಡಿಯ ಮುಖಾಂತರ ಎಲ್ಲರ ಮನೆ ಮಾತಾಗಿರಲಿ ಎಂದು ನಾಡೋಜ ಹಂಪನಾ ರವರು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಸಾಮಾಜಿಕ ಹೋರಾಟಗಾರ ಸಮಾಜ ಸೇವಕ ಮಾಳ ಹರ್ಷೇಂದ್ರ ಜೈನ್ ಮಾತನಾಡುತ್ತಾ ಸರಳ ಸ್ವಭಾವದ ಜ್ಯೋತಿಷಿ ಪಂಡಿತ ಬಿಕೆ ಸುಬಾಷ್ ಚಂದ್ರ ಜೈನ್ ರವರು ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಹಲವಾರು ದೀನದಲಿತ ಬಂದು ಬಳಗದವರಿಗೆ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಮಾಡಿ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದು ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಅಭಿರುಚಿ ಹೊಂದಿದ್ದ ಶ್ರೀಯುತರು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದು ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು. ಸದರಿ ಬೆಳ್ತಂಗಡಿ ತಾಲೂಕಿನಲ್ಲಿ ತಮ್ಮ ಜ್ಯೋತಿಷ್ಯ ಕೇಂದ್ರದ ಮುಖಾಂತರ ಹೆಸರುವಾಸಿಯಾಗಿದ್ದು, ಈ ದಿನ ಬೆಂಗಳೂರಿನಲ್ಲಿ ಅಪಾರ ಬಂಧು ಮಿತ್ರರ ಅಪೇಕ್ಷೆಯ ಮೇರೆಗೆ ನೂತನ ಶಾಖೆಯ ಶುಭಾರಂಭಗೊಂಡಿದೆ.
ಕಾಲ ಎಷ್ಟೇ ಬದಲಾದರೂ ವಿಜ್ಞಾನ ಎಷ್ಟೇ ಮುಂದುವರಿದರು ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವಂತಹ ಕೆಲವೊಂದು ಅಗಾಧ ಶಕ್ತಿಯ ಜ್ಯೋತಿಷ್ಯ ಶಾಸ್ತ್ರವು ಮಾನವನ ಜೀವನದಲ್ಲಿ ಗೌರವಿಸುವ ಪರಂಪರೆ ಹಾಗೂ ಜೀವನದ ಮತ್ತೊಂದು ಅಂಗವಾಗಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವನದ ಪ್ರತಿಯೊಂದು ಗಳಿಗೆಯಲ್ಲಿಯೂ ಜ್ಯೋತಿಷ್ಯ ಶಾಸ್ತ್ರ ಅತಿ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಪಂಚದಲ್ಲಿ ವಿಜ್ಞಾನ ಎಷ್ಟೇ ಮುಂದುವರಿದರು ಜ್ಯೋತಿಷ್ಯ ಶಾಸ್ತ್ರ ಕೂಡ ಜೊತೆ- ಜೊತೆಯಲಿ ಸಾಗುತ್ತಿರುವುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣಮುಂದೆ ಇದೆ. ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವ ನಾಮಿನೇಷನ್ ಪ್ರಕ್ರಿಯೆಯ ಸಮಯ, ಮಗುಗೆ ಹೆಸರಿಡುವ ಕ್ರಿಯೆ, ಮನೆಯ ಗುದ್ದಲಿ ಪೂಜೆ ಗೃಹಪ್ರವೇಶ, ನಾಮಕರಣ ಮದುವೆ, ಹುಡುಗ ಹುಡುಗಿಯ ಜಾತಕ ಫಲ, ಮಕ್ಕಳಿಗೆ ವಿದ್ಯಾಭ್ಯಾಸ ಅಷ್ಟೇ ಅಲ್ಲದೆ ಅನಾರೋಗ್ಯದ ಸಮಯದಲ್ಲಿ ಹೃದಯ ಚಿಕಿತ್ಸೆಯ ಸಮಯಕ್ಕೂ ಜಾತಕ ಶಾಸ್ತ್ರದ ಪ್ರಕಾರ ಸಮಯ ನೋಡುತ್ತಾರೆ. ಹಾಗೂ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಮಗುವಿನ ಜನನ ಸಮಯವನ್ನು ಕೂಡ ಜಾತಕವನ್ನು ನೋಡಿಕೊಂಡು ಮಗುವನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಜನನ ಮಾಡಿಸುತ್ತಾರೆ.
ವಿಶ್ವವಿಖ್ಯಾತ ಇಸ್ರೋದಂತ ದೊಡ್ಡ ಸಂಸ್ಥೆಗಳು ರಾಕೆಟ್ ಉಡಾವಣೆಯ ಸಮಯವನ್ನು ಜ್ಯೋತಿಷ್ಯ ಶಾಸ್ತ್ರ ಹಾಗೂ ವೈಜ್ಞಾನಿಕವಾಗಿ ಉಡಾವಣೆ ಮಾಡುವುದನ್ನು ನಾವೆಲ್ಲರೂ ಕಂಡಿದ್ದೇವೆ. ಒಟ್ಟಿನಲ್ಲಿ ಜ್ಯೋತಿಷ್ಯ ವಾಸ್ತು ಶಾಸ್ತ್ರಗಳು ಮನುಷ್ಯನ ಜೀವನದಲ್ಲಿ ಅತಿ ಮುಖ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟರು. ಜ್ಯೋತಿಷ್ಯ ಪಂಡಿತ ಬಿಕೆ ಸುಬಾಷ್ ಚಂದ್ರ ಜೈನ ಅವರು ಮಾತಾಡುತ್ತಾ ಜೀವನದಲ್ಲಿ ಸದಾ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಹೆಚ್ಚಿನ ಬಂಧುಗಳು ಕೊನೆಯ ಸಮಯದಲ್ಲಿ ಜ್ಯೋತಿಷ್ಯಕ್ಕೆ ಮಾರುಹೋಗಿ ಎಷ್ಟು ಕಡೆ ತಾವು ಹೇಳಿಕೊಳ್ಳಲಾಗದೆ ಮೋಸ ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಜ್ಯೋತಿಷ್ಯ ಶಾಸ್ತ್ರವನ್ನು ಯಾರು ಮೂಢನಂಬಿಕೆಯಾಗಿ ತಗೊಳ್ಳಬಾರದು ಇದು ನಮ್ಮ ಜೀವನದ ಕರ್ಮಫಲದ ಒಂದು ಅಂಗವಾಗಿದ್ದು ಪ್ರತಿಯೊಬ್ಬ ಮನುಷ್ಯನ ಪ್ರತಿಯೊಂದು ಕೆಲಸವು ಪೂರ್ವ ನಿಯೋಜಿತ ತಮ್ಮ ಕರ್ಮಫಲದ ಮುಖಾಂತರವೇ ನಡೆಯುತ್ತದೆ.ಈ ಸಂದರ್ಭದಲ್ಲಿ ನಾವುಗಳು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ತಮ್ಮ ಜೀವನವನ್ನು ಅಳವಡಿಸಿಕೊಳ್ಳುವುದು ಅತೀ ಅಗತ್ಯ ಹಾಗೂ ಬ್ಯಾಂಕ್ ಸೇವೆಯ ನಿವೃತ್ತಿಯ ನಂತರ ಹೆಚ್ಚಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಹವ್ಯಾಸವಾಗಿ ಮಾಡಿಕೊಂಡು ಬಂದಿದ್ದು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ಬಂಧುಗಳು ನನ್ನ ಜ್ಯೋತಿಷ್ಯ ಶಾಸ್ತ್ರವನ್ನು ಮೆಚ್ಚಿಕೊಂಡಿದ್ದು ಬೆಂಗಳೂರಿನ ಶಾಖೆಯೂ ಎಲ್ಲಾ ಬಂಧುಗಳಿಗೆ ಫಲಪ್ರದವಾಗಿರಲಿ ಮತ್ತು ಶಾಖೆಯನ್ನು ಆರಂಭಿಸಲು ಬೆನ್ನೆಲುಬಾಗಿ ನಿಂತ ತನ್ನೆಲ್ಲ ಸ್ನೇಹಿತ ವರ್ಗದವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಶಾಖೆ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಖ್ಯಾತ ಸಾಹಿತಿ ಮತ್ತು ಕಲಾ ಪ್ರೇಮಿ ಶ್ರೀಮತಿ ಜಯಲಕ್ಷ್ಮಿ ಅಭಯ ಕುಮಾರ್, ಬಿಎಸ್ಎಂ ಅಸೋಸಿಯೇಷನ್ ಅಧ್ಯಕ್ಷ ಯಶೋಧರ ಅಧಿಕಾರಿ, ಉಪಾಧ್ಯಕ್ಷ ಪಣಿರಾಜ್ ಜೈನ್, ಕಟ್ಟಡ ಮಾಲೀಕರಾದ ಮಹಾವೀರ ಆಳ್ವ, ನಿವೃತ್ತ ಶಿಕ್ಷಕ ಪೃಥ್ವಿರಾಜ್ ಜೈನ್ ತಮ್ಮ ಎರಡು ಮಾತುಗಳಲ್ಲಿ ಶುಭಾಶಯಗಳನ್ನು ನೀಡಿದರು. ಸಮಾಜದ ಗಣ್ಯರಾದ ಮಾಲತಿ ಜೈನ್, ಜೈನ್ ಮಿಲನ್ ನಿರ್ದೇಶಕ ನಿರಂಜನ್ ಜೈನ್, ಜಯವರ್ಮ ಜೈನ್, ಸಂಜೀವ, ವಿದ್ಯಾನಂದ, ಜ್ಞಾನೇಶ್ವರಿ-ಸಮ್ಮತಿ ಆಳ್ವ, ಬಾಹುಬಲಿ ಪುರೋಹಿತರು, ಚಂದ್ರಪ್ರಭ ಜೈನ್, ಸುಕುಮಾರ್ ಗೌತಮ್ ಜೈನ್, ಲೆಕ್ಕಪರಿಶೋಧಕ ಪ್ರಸನ್ನ ಕುಮಾರ್ ಹಾಗೂ ಜ್ಯೋತಿಷ್ಯ ಪಂಡಿತರ ಉತ್ತರ ಪ್ರಿತೇಶ್ ಜೈನ್ ಮತ್ತು ಸ್ನೇಹಿತರು ಅಪಾರ ಬಂದು ಬಳಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.