ಬೆಳ್ತಂಗಡಿ: ತುಮಕೂರು ಇಲ್ಲಿನ ಕುಚ್ಚಂಗಿ ಕೆರೆಯಲ್ಲಿ ಬೆಳ್ತಂಗಡಿಯ ಮೂವರನ್ನು ಕಾರಿನಲ್ಲಿ ಹಾಕಿ ಸುಟ್ಟು ಹಾಕಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ತಾ ಇದೆ.ಕೊಲೆಯಾದ ಮದ್ದಡ್ಕದ ಇಸಾಕ್, ಶಿರ್ಲಾಲಿನ ಇಮ್ತಿಯಾಜ್, ಟಿ ಬಿ ಕ್ರಾಸ್ ನ ಸಾಹುಲ್ ಹಮೀದ್ ಚಿನ್ನದ ಆಸೆಯಿಂದ ತುಮಕೂರಿಗೆ ತೆರಳಿದ್ದರು ಎನ್ನಲಾಗಿದ್ದು, ಇದಕ್ಕಾಗಿ 50 ಲಕ್ಷದಷ್ಟು ಹಣ ಹೊಂದಿಸಿಕೊಂಡು ಹೋಗಿದ್ದರೆನ್ನುವ ಮಾಹಿತಿಯೂ ಹರಿದಾಡುತ್ತಿದೆ.
ತುಮಕೂರಿನ ಸ್ವಾಮಿ ಎಂಬಾತನಿಂದ ಕರೆ ಬಂದ ಹಿನ್ನಲೆಯಲ್ಲಿ ಇಸಾಕ್ ಕಡಿಮೆ ಬೆಲೆಯಲ್ಲಿ ಚಿನ್ನ ಸಿಗುತ್ತದೆ ಅನ್ನುವುದಕ್ಕಾಗಿ ತೆರಳಿದ್ದರು.ಸ್ವಾಮಿ ಎಂಬಾತ ಇಸಾಕ್ ಗೆ ಕರೆ ಮಾಡಿ ನಿಧಿ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಹೀಗೆ ದಿನಗಳ ಹಿಂದೆ ತುಮಕೂರಿಗೆ ತೆರಳಿದ ಇಸಾಕ್ ಮತ್ತು ತಂಡದವರಲ್ಲಿ 50 ಲಕ್ಷದಷ್ಟು ಹಣವಿತ್ತು ಎನ್ನಲಾಗಿದ್ದು, ಈ ಹಣಕ್ಕಾಗಿಯೇ ತುಮಕೂರಿನ ಗ್ಯಾಂಗ್ ಇವರನ್ನು ಕೊಲೆಗೈದಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಮೊದಲು ಕೊಲೆಗೈದು ನಂತರ ಇವರ ಕಾರನ್ನು ಕುಚ್ಚಂಗಿ ಕೆರೆಯ ಬಳಿ ತಂದು ಅಲ್ಲಿ ಬೆಂಕಿ ಹಚ್ಚಿರುವ ಬಗ್ಗೆ ಅನುಮಾನವಿದೆ. ಯಾಕಂದ್ರೆ, ಕುಚ್ಚಿಂಗಿ ಕೆರೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಾರಿನ ಡಿಕ್ಕಿಯಲ್ಲಿ ಇಬ್ಬರ ಶವ ಹಾಗೂ ಹಿಂಬದಿ ಸೀಟಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ.ಈ ಪ್ರಕರಣ ಸಂಬಂಧ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತದೇಹ ಹಸ್ತಾಂತರಕ್ಕೆ 10 ದಿನ ತಗುಲುವ ಸಾಧ್ಯತೆ: ಕಾರು ಮತ್ತು ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿರುವುದರಿಂದ ಮೃತದೇಹಗಳನ್ನು ಗುರುತಿಸಲು ಡಿ.ಎನ್.ಎ ನಡೆಸಬೇಕಾಗಿದೆ. ಇದು ನ್ಯಾಯಾಲಯದ ಮೂಲಕವೇ ಆಗಬೇಕಿದ್ದು, ಮಂಗಳವಾರದಂದು ಇದು ನಡೆಯುವ ಸಾಧ್ಯತೆಯಿದ್ದು, ಎಲ್ಲಾ ಪರೀಕ್ಷೆಗಳು ಮುಗಿದು ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಕ್ಕೆ ಒಂದು ವಾರದಿಂದ ಹತ್ತು ದಿನ ಬೇಕಾಗಬಹುದು ಎನ್ನಲಾಗಿದೆ.