ಬೆಳ್ತಂಗಡಿ: ವಾಹನಗಳಿಗೆ ವಿಮೆ ಪಾವತಿಸುವುದು ಕಡ್ಡಾಯವಾಗಿದೆ.ಇದು ಅಪಘಾತ ಸಂದರ್ಭ ಪರಿಹಾರಕ್ಕೆ ಸಹಕಾರಿಯಾಗುತ್ತದೆ.
ವಾಹನ ಅಪಘಾತ ಸಂದರ್ಭ 50,000ರೂ.ಗಿಂತ ಅಧಿಕ ನಷ್ಟದ ಪರಿವೀಕ್ಷಣೆಯನ್ನು ಸರಕಾರದ ಪರವಾನಿಗೆ ಹೊಂದಿದ ವಿಮಾ ಸರ್ವೆಯರ್ ಗಳ ಮೂಲಕವೇ ಮಾಡಿಸಬೇಕು, ಇದರಿಂದ ವಿಮೆ ಕಟ್ಟಿದ ವ್ಯಕ್ತಿಗೆ ನ್ಯಾಯಯುತ ಪರಿಹಾರ ಸಿಗುತ್ತದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೆಯರ್ಸ್ ಆಂಡ್ ಲಾಸ್ ಎಸ್ಸೆಸರ್ಸ್ಸ್ ಮಂಗಳೂರು ಯುನಿಟ್ ನ ಸಂಯೋಜಕ ಹರ್ಷ ಡಿ’ಸೋಜಾ ಹೇಳಿದರು.
ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ಮಾ.2ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಅಧಿಕೃತ ಸರ್ವೆಯರ್ ಗಳ ಮೂಲಕವೇ ಪರಿವೀಕ್ಷಣೆ ನಡೆಸಬೇಕು ಎಂಬ ಕಾನೂನು ಇದ್ದರು ಹೆಚ್ಚಿನ ಖಾಸಗಿ ವಾಹನ ವಿಮಾ ಕಂಪನಿಗಳು ಕಾನೂನುಬಾಹಿರವಾಗಿ ತಮ್ಮ ಕಂಪೆನಿಯ ಸಿಬ್ಬಂದಿ, ಗುತ್ತಿಗೆದಾರರಿಂದ ಪರಿವೀಕ್ಷಣೆ ನಡೆಸಿ ಜನಸಾಮಾನ್ಯರಿಗೆ ಪರಿಹಾರ ಒದಗಿಸುವಲ್ಲಿ ಅನ್ಯಾಯ ಮಾಡುತ್ತಿವೆ” ಎಂದು ಹೇಳಿದರು.
ಸಹ ಸಂಯೋಜಕ ವಿಷ್ಣು ಮರಾಠೆ ಮಾತನಾಡಿ ಖಾಸಗಿ ಕಂಪೆನಿಯವರು ಜನರಿಗೆ ತಮ್ಮ ವಾಹನ ದುರಸ್ತಿಯ ಮೊತ್ತವನ್ನು ತಾವೇ ಪಾವತಿಸುವುದಾಗಿ ತಿಳಿಸಿ ವಾಹನವನ್ನು ದುರಸ್ತಿ ಕೇಂದ್ರದಿಂದ ಬಿಡುಗಡೆ ಮಾಡಲು ತಿಳಿಸುತ್ತಾರೆ.
ನಂತರ ಹಣ ಪಾವತಿಸುವಾಗ ಕಡಿಮೆ ಮೊತ್ತ ಮಂಜೂರು ಮಾಡಿ ಮೋಸ ಮಾಡುತ್ತಾರೆ.
50,000ರೂ.ಗಿಂತ ಹೆಚ್ಚು ಮೊತ್ತದ ಅಂದಾಜು ಪಟ್ಟಿಯನ್ನು ವಾಹನ ದುರಸ್ತಿ ಕೇಂದ್ರದವರು ನೀಡಿದಲ್ಲಿ, ಪರವಾನಿಗೆ ಹೊಂದಿದ ಸರ್ವೆಯರ್ ಗಳ ಮೂಲಕವೇ ಪರಿವೀಕ್ಷಣೆ ನಡೆಸಬೇಕು, ಖಾಸಗಿ ಕಂಪೆನಿಯವರು ತಮ್ಮ ಸಿಬ್ಬಂದಿಗಳನ್ನು ಮೌಲ್ಯಮಾಪನಕ್ಕೆ ಕಳುಹಿಸಿದರೆ ಅಥವಾ ದುರಸ್ತಿ ಕೇಂದ್ರದವರೇ ಫೋಟೋ ತೆಗೆದು ಕಳುಹಿಸಿ ಮೌಲ್ಯಮಾಪನ ಮಾಡಿಸಿದಲ್ಲಿ ತಕ್ಷಣ ಅಧಿಕೃತ ಸರ್ವೆಯರ್ ಗಳ ಗಮನಕ್ಕೆ ತರಬೇಕು”ಎಂದು ತಿಳಿಸಿದರು.
ರಾಜ್ಯ ಘಟಕದ ದೇವದಾಸ ಆಳ್ವ, ಹಿರಿಯ ಸರ್ವೆಯರ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.