ಉಜಿರೆ: ‘ಸ್ಪೀಕ್ ಫಾರ್ ಇಂಡಿಯಾ’ ಕರ್ನಾಟಕ ಆವೃತ್ತಿ 2023-24 (Speak for India Karnataka Edition 2023-24) ಚರ್ಚಾ ಸ್ಪರ್ಧೆಯಲ್ಲಿ ಇಲ್ಲಿನ ಶ್ರೀ ಧ.ಮಂ.ಸ್ವಾಯತ್ತ ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಶಾಮ ಪ್ರಸಾದ್ ಎಚ್.ಪಿ. ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿಗಳಲ್ಲಿ ಚರ್ಚಾ ಮನೋಭಾವ ಹೆಚ್ಚಿಸುವ ಉದ್ದೇಶದಿಂದ ಫೆಡರಲ್ ಬ್ಯಾಂಕ್, ಹಾರ್ಮಿಸ್ ಸ್ಮಾರಕ ಸಂಸ್ಥೆ ಹಾಗೂ ದಿ ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಗಳ ಸಹಯೋಗದೊಂದಿಗೆ ಆಯೋಜಿಸಲಾದ ‘ಸ್ಪೀಕ್ ಫಾರ್ ಇಂಡಿಯಾ’ 7ನೇ ಆವೃತ್ತಿಯ ಅಂತಿಮ ಸುತ್ತಿನ ಸ್ಪರ್ಧೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ್ ಕಾಲೇಜಿನಲ್ಲಿ ಫೆ.16ರಂದು ನಡೆಯಿತು.
ಸ್ಪರ್ಧೆಗೆ ರಾಜ್ಯದ 18 ಸಾವಿರ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು.850ಕ್ಕೂ ಹೆಚ್ಚು ಕಾಲೇಜುಗಳ 6,300 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.45 ವಿದ್ಯಾರ್ಥಿಗಳು ಸೆಮಿ ಫೈನಲ್’ನಲ್ಲಿ ಸ್ಪರ್ಧಿಸಿ, ಅಂತಿಮ ಸ್ಪರ್ಧೆಗೆ 8 ಮಂದಿ ಆಯ್ಕೆಯಾಗಿದ್ದರು. ಅತ್ಯುತ್ತಮವಾಗಿ ವಿಷಯ ಮಂಡಿಸಿದ ಇಬ್ಬರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.
ಅಂತಿಮ ಸ್ಪರ್ಧೆಯಲ್ಲಿ, ‘ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಸೇವಾ ಶಿಕ್ಷಣದ ಆವಶ್ಯಕತೆ ಇದೆಯೇ?’, ‘ಕೃತಕ ಬುದ್ಧಿಮತ್ತೆ ನಿಯಂತ್ರಣ ಬೇಕೇ?’ ಹಾಗೂ ‘ಜಾಗತಿಕ ಹವಾಮಾನ ವೈಪರೀತ್ಯ’ ಕುರಿತು ಚರ್ಚೆ ನಡೆಯಿತು.ಆತಿಕಾ ಜೈನಾಬ್ ಸಿದ್ದಿಕಿ ಮತ್ತು ಶಾಮ ಪ್ರಸಾದ್ ನಡುವೆ ಸ್ಪರ್ಧೆ ಏರ್ಪಟ್ಟು, ಶಾಮಪ್ರಸಾದ್ ವಿನ್ನರ್, ಆತಿಕಾ ರನ್ನರ್ ಅಪ್ ಸ್ಥಾನ ಗಳಿಸಿದರು.ಒಂದು ಬಾರಿ ಒಂದು ವಿಷಯದ ಪರವಾಗಿ ಮಾತನಾಡಿದ ಸ್ಪರ್ಧಿ ಅಂತಿಮ ಸುತ್ತಿನಲ್ಲಿ ಅದೇ ವಿಷಯಕ್ಕೆ ವಿರುದ್ಧವಾಗಿ ಮಾತನಾಡುವ ಸನ್ನಿವೇಶ ಏರ್ಪಟ್ಟಿತ್ತು.ಶಾಮ ಪ್ರಸಾದ್ ಇದನ್ನು ಸೊಗಸಾಗಿ ನಿರ್ವಹಿಸಿದರು.
ಪ್ರಥಮ ಸ್ಥಾನಿಗೆ ಟ್ರೋಫಿಯೊಂದಿಗೆ 2.5 ಲಕ್ಷ ರೂ. ನಗದು ಬಹುಮಾನ, ದ್ವಿತೀಯ ಸ್ಥಾನಿಗೆ 1.4 ಲಕ್ಷ ರೂ. ಹಾಗೂ ಉಳಿದ ಆರು ಮಂದಿ ವಿದ್ಯಾರ್ಥಿಗಳಿಗೆ ತಲಾ 35 ಸಾವಿರ ರೂ. ನಗದು ಬಹುಮಾನ ಲಭಿಸಿದೆ.
ಮುಖ್ಯ ಅತಿಥಿಗಳಾದ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ, ನಟ-ಗಾಯಕ ವಾಸುಕಿ ವೈಭವ್ ಹಾಗೂ ನಟಿ ಶ್ರುತಿ ಹರಿಹರನ್ ಅವರು ವಿಜೇತರಿಗೆ ಚೆಕ್ ವಿತರಿಸಿ ಅಭಿನಂದಿಸಿದರು. ಫೆಡರಲ್ ಬ್ಯಾಂಕ್ ಹಿರಿಯ ಉಪಾಧ್ಯಕ್ಷ ಬಿ. ದಿಲೀಪ್, ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಎಂ.ವಿ.ಎಸ್. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.