ಬೆಳ್ತಂಗಡಿ: ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅವರು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಜಮಾಲಾಬಾದ್ ಕೋಟೆ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯ ವಸತಿಗೃಹ ನಿರ್ಮಾಣ ಕಾಮಗಾರಿಯ ಕುರಿತು ವಿಧಾನ ಪರಿಷತ್ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಕಾನೂನು, ನ್ಯಾಯ, ಮಾನವ ಹಕ್ಕಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಖಾತೆಯ ಸಚಿವರಾದ ಎಚ್.ಕೆ.ಪಾಟೀಲ್ ಉತ್ತರ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಿಂದ 2015-16ನೇ ಸಾಲಿನ ಬಂಡವಾಳ ವೆಚ್ಚಗಳ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಜಮಲಾಬಾದ್ ಕೋಟೆ ಪ್ರದೇಶದಲ್ಲಿ 10 ಕೊಠಡಿಗಳ ಯಾತ್ರಿನಿವಾಸ ನಿರ್ಮಾಣ ಕಾಮಗಾರಿಯನ್ನು ರೂ.40.00 ಲಕ್ಷಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸರ್ಕಾರದಿಂದ ದಿನಾಂಕ 08-08-2015ರಂದು ಅನುಮೋದನೆ ನೀಡಲಾಗಿದೆ.ಸದರಿ ಕಾಮಗಾರಿಗೆ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆರವರು ದಿನಾಂಕ 13-06-2018ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ.
2018ನೇ ಸಾಲಿನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಅವರು ಹರೀಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.ಸದರಿ ವಸತಿ ಗೃಹಗಳ ಕಾಮಗಾರಿಯ ಪ್ರಗತಿ ಯಾವ ಹಂತದಲ್ಲಿದೆ.ಕಾಮಗಾರಿಯ ವಿಳಂಬಕ್ಕೆ ಕಾರಣವೇನು, ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸಲಾಗುವುದು ಎಂದು ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಸಚಿವ ಪಾಟೀಲ್ ಅವರು ಸದರಿ ಕಾಮಗಾರಿಯ ಕಟ್ಟಡದ ಪ್ಲಾಸ್ಟರಿಂಗ್ ಕಾಮಗಾರಿ ಪೂರ್ಣಗೊಂಡಿದೆ.ಈ ಕಾಮಗಾರಿಗೆ ಇಲಾಖೆಯಿಂದ ಈಗಾಗಲೇ ರೂ.20 ಲಕ್ಷ ಬಿಡುಗಡೆಗೊಳಿಸಿದ್ದು ರೂ. 20 ಲಕ್ಷಗಳಿಗೆ ಅನುಷ್ಠಾನ ಸಂಸ್ಥೆಯವರು ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.ಪ್ರವಾಸೋದ್ಯಮ ಇಲಾಖೆಗೆ ಕೋವಿಡ್ 19ರ ಹಿನ್ನೆಲೆಯಲ್ಲಿ 2020-21 ಮತ್ತು 2021-22ನೇ ಸಾಲುಗಳಲ್ಲಿ ಬಂಡವಾಳ ವೆಚ್ಚಗಳ ಲೆಕ್ಕ ಶೀರ್ಷಿಕೆಯಡಿಯಲ್ಲಿ ಕ್ರಮವಾಗಿ ರೂ.35 ಕೋಟಿ ಹಾಗೂ ರೂ.21 ಕೋಟಿಗಳನ್ನು ಮಾತ್ರ ಒದಗಿಸಿದ್ದು 2022-23ನೇ ಸಾಲಿನಲ್ಲಿ ರೂ.23.50 ಕೋಟಿಗಳನ್ನು ಮಾತ್ರ ಒದಗಿಸಿದ್ದು ೯೦೦ಕ್ಕೂ ಅಧಿಕ ಮುಂದುವರೆದ ಕಾಮಗಾರಿಗಳಿದೆ.ಈ ಪೈಕಿ ಪೂರ್ಣಗೊಂಡಿರುವ ಹಾಗೂ ಪೂರ್ಣಗೊಳ್ಳುವ ಹಂತದಲ್ಲಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.ಆದುದರಿಂದ 2020-21, 2021-22 ಮತ್ತು 2022-23ನೇ ಸಾಲುಗಳಲ್ಲಿ ಅನುದಾನದ ಕೊರತೆಯಿಂದ ಸದರಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿರುವುದಿಲ್ಲ.ಈ ಕಾಮಗಾರಿಯ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ರದವರು ಅನುದಾನ ಬಿಡುಗಡೆಯಾದಲ್ಲಿ 6 ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದು ಬಾಕಿ ಉಳಿದ ಅನುದಾನವನ್ನು ಬಿಡುಗಡೆ ಮಾಡಲು ಪ್ರಸ್ತುತ ಸಾಲಿನಲ್ಲಿ ಇಲಾಖೆಗೆ ಒದಗಿಸಿರುವ ಅನುದಾನದ ಲಭ್ಯತೆಗನುಗುಣವಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ಉತ್ತರ ನೀಡಿದ್ದಾರೆ.