ಉಜಿರೆ: ಉಡುಪಿ ಶ್ರೀ ಕೃಷ್ಣ ಮಠ ದಲ್ಲಿ ಮುಂದಿನ ಜ.18ರಂದು ಎರಡು ವರ್ಷಗಳ ಅವಧಿಯ ಶ್ರೀ ಕೃಷ್ಣ ಪೂಜೆಯ ಚತುರ್ಥ ಪರ್ಯಾಯ ಪೀಠಾರೋಹಣಗೈಯಲಿರುವ ಪುತ್ತಿಗೆ ಮಠಾಧೀಶರಾದ ಪರಮ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ.4ರಂದು ಬೆಳಿಗ್ಗೆ 9.30ಕ್ಕೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಆಗಮಿಸಿ, ಪಟ್ಟದ ದೇವರಿಗೆ ಪೂಜೆ ಹಾಗು ಶ್ರೀಗಳವರಿಂದ ಆಶೀರ್ವಚನ ನಡೆಯಲಿದೆ.
ಅಪರಾಹ್ನ 2.00 ಗಂಟೆಗೆ ಉಜಿರೆಯ ನ್ಯಾಚುರೋಪತಿ ಕಾಲೇಜಿನ ಸಭಾಂಗಣದಲ್ಲಿ ಪ್ರೌಢ ಶಾಲೆ ಹಾಗು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ “ಭಗವದ್ಗೀತೆ ” ಪುಸ್ತಕಗಳನ್ನು ವಿತರಿಸಿ “ಕೋಟಿ ಗೀತಾ ಲೇಖನ ಯಜ್ಞ”ದ ದೀಕ್ಷೆ ನೀಡಿ ಆಶೀರ್ವಚನ ನೀಡಲಿದ್ದಾರೆ.
ಶ್ರೀಗಳವರು ತಮ್ಮ ಚತುರ್ಥ ಪರ್ಯಾಯವನ್ನು “ವಿಶ್ವ ಗೀತಾ ಪರ್ಯಾಯ ” ಎಂದು ಶ್ರೀ ಕೃಷ್ಣನಿಗೆ ಸಮರ್ಪಿಸುವ ಪೂರ್ವಭಾವಿಯಾಗಿ ಉಜಿರೆಗೆ ಆಗಮಿಸಿ ಭಕ್ತಾದಿಗಳನ್ನು ಪರ್ಯಾಯ ಮಹೋತ್ಸವಕ್ಕೆ ಆಮಂತ್ರಿಸಿ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿದ್ದಾರೆ.
ತಾಲೂಕಿನ ಭಗವದ್ಭಕ್ತರು ಆಗಮಿಸಿ ಶ್ರೀಗಳವರಿಂದ ಅನುಗ್ರಹೀತರಾಗುವಂತೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.