ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಒಳಾಂಗಣದಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಮತ್ತು ಪಟ್ಟಣ ಪಂಚಾಯತ್ ಬೆಳ್ತಂಗಡಿ ಇವುಗಳ ಸಹಭಾಗಿತ್ವದಲ್ಲಿ ಶ್ರೀದೇವಿ ಆಪ್ಟಿಕಲ್ಸ್ ಸಂತೆಕಟ್ಟೆ ಬೆಳ್ತಂಗಡಿ ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಾಯಿಬಾಬಾ ಪೂಜಾ ಸಾಮಾಗ್ರಿಗಳ ಮಳಿಗೆ ಸಂತೆಕಟ್ಟೆ ಇದರ ಒಂದನೇ ವರ್ಷದ ಪಾದಾರ್ಪಣೆ ಪ್ರಯುಕ್ತ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 544ನೇಯ ಸೇವಾ ಯೋಜನೆಯ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜ.1ರಂದು ನಡೆಯಿತು.
ಪತ್ರಕರ್ತ ಮನೋಹರ ಬಳಂಜ ಉದ್ಘಾಟಿಸಿ ಮಾತನಾಡಿ ರಾಜಕೇಸರಿ ಸಂಘಟನೆಯು ಸರಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ, ಅನಾಥಾಶ್ರಮಕ್ಕೆ ನೆರವು, ಮುಕ್ತಿ ಧಾಮಕ್ಕೆ ಕಟ್ಟಿಗೆ ವ್ಯವಸ್ಥೆ, ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ, ನಿರುದ್ಯೋಗಿ ಮಹಿಳೆಯರಿಗೆ ಟೈಲರಿಂಗ್ ಮಷಿನ್ ಹಸ್ತಾಂತರ ಮತ್ತು ಕಲೆ, ಸಾಹಿತ್ಯ, ಕ್ರೀಡೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಮಾಡಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಖ್ಯಾತ ನೇತ್ರ ತಜ್ಞ ಡಾ.ಸುಧೀಂದ್ರ ಮಾತನಾಡಿ ರಾಜಕೇಸರಿ ಸಂಘಟನೆಯು ಹಮ್ಮಿಕೊಂಡಿರುವ ಉಚಿತ ನೇತ್ರ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಮನುಷ್ಯನ ಅಮೂಲ್ಯ ಅಂಗವಾದ ಕಣ್ಣನ್ನು ರಕ್ಷಿಸಿಕೊಳ್ಳಬೇಕು ಎಂದರು.
ತಾಲೂಕು ರಾಜಕೇಸರಿ ಸಂಘಟನೆಯ ಅಧ್ಯಕ್ಷ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿಗಳಾದ ಸಂತೋಷ್ ಕುಮಾರ್, ಮಂಜುಳಾ, ನಗರ ಪಂಚಾಯತ್ ನ ಕರುಣಾಕರ, ರಾಜಕೇಸರಿ ಸಂಘಟನೆಯ ಪ್ರತೀಕ್ಷಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂತೆಕಟ್ಟೆ ಮಾರುಕಟ್ಟೆಯಲ್ಲಿ 30 ವರ್ಷಕ್ಕೂ ಅಧಿಕ ವ್ಯವಹಾರ ನಡೆಸುತ್ತಿರುವ ನಾರಾಯಣ ಸಫಲ್ಯ, ಅಮಿರುದ್ದೀನ್, ಸುಕೇಶ್ ಕೋಟ್ಯಾನ್, ಬಾಬು ಮುಗುಳಿ, ನವೀನ್, ಉದಯ್ ಕುಮಾರ್ ಕುಕ್ಕುಜೆ, ಉದ್ಯಮಿ ನಾರಾಯಣ ಸಫಲ್ಯ ಇವರನ್ನು ರಾಜಕೇಸರಿ ವತಿಯಿಂದ ಅಭಿನಂದಿಸಲಾಯಿತು.
ರಾಜಕೇಸರಿ ಸಂಘಟನೆಯ ಗೌರವ ಸಲಹೆಗಾರ ಪ್ರೇಮ್ ರಾಜ್ ರೋಶನ್ ಸಿಕ್ವೇರಾ ಸ್ವಾಗತಿಸಿ ವಂದಿಸಿದರು. ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಸಹಕರಿಸಿದರು.