ಮಿತ್ತಬಾಗಿಲು: ಮಿತ್ತಬಾಗಿಲು ಹಾಗೂ ಮಲವಂತಿಗೆ ಗ್ರಾಮ ವ್ಯಾಪ್ತಿಯಲ್ಲಿರುವ ಕೊಲ್ಲಿ-ಪರಾರಿ-ಕೊಂಡಾಲು-ಪಣಿಕಲ್ಲು ಪಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.
ಸುಮಾರು 6ಕಿಮೀ ವ್ಯಾಪ್ತಿಯ ಈ ರಸ್ತೆ ಅಲ್ಲಿನ ಸಾವಿರಾರು ಜನರಿಗೆ ಉಪಯೋಗವಾಗುತ್ತಿದೆ.ತೀರಾ ಕಚ್ಚಾ ರಸ್ತೆಯಾಗಿರುವ ಇಲ್ಲಿ ಮಳೆಗಾಲದಲ್ಲಿ ಸಂಚರಿಸುವುದೆಂದರೆ ಅದೊಂದು ಸಾಹಸವೆ ಸರಿ.ಕಿರು ಸೇತುವೆಗಳು, ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿಯುವ ಹಳ್ಳಗಳು, ಕೆಸರು ತುಂಬಿ ವಾಹನ ಹೂತು ಹೋಗುವ ಪರಿಸ್ಥಿತಿಯಿಂದ ರಸ್ತೆಯಲ್ಲಿ ಸಂಚರಿಸುವ ಇಲ್ಲಿನ ಮಂದಿ ಹೈರಾಣರಾಗಿದ್ದರು.ಹಲವಾರು ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದ್ದರೂ ಅದು ಈಡೇರಲಿಲ್ಲ.
4 ಕೋಟಿ ರೂ. ಅನುದಾನ: ಶಾಸಕ ಹರೀಶ್ ಪೂಂಜ ಕಳೆದ ಅವಧಿಯಲ್ಲಿ ಈ ಪ್ರದೇಶಕ್ಕೆ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು.ಅದರಂತೆ ಈಗ 4 ಕೋಟಿ ರೂ.ಅನುದಾನದಲ್ಲಿ ಸುಮಾರು 4 ಕಿಮಿಯಷ್ಟು ದೂರದ ಕಾಂಕ್ರೀಟ್ ಕಾಮಗಾರಿ ಆರಂಭವಾಗಿದೆ.ಇದರೊಂದಿಗೆ ಪರಾರಿ, ಪಣಿಕಲ್ಲು, ಕಲ್ಬೆಟ್ಟು ಪರಿಸರದಲ್ಲಿ ಮೂರು ಕಿರು ಸೇತುವೆಗಳು ನಿರ್ಮಾಣಗೊಳ್ಳಲಿವೆ.6 ಕಿಮೀ ವ್ಯಾಪ್ತಿಯ ರಸ್ತೆಯ 4 ಕಿಮೀ ಪ್ರದೇಶ ಅಭಿವೃದ್ಧಿಗೊಳ್ಳುವುದರಿಂದ ಇಲ್ಲಿನ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.