ಬಳಂಜ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮುಂಬಯಿ ಶಾಖೆಯ ಮುಖ್ಯಸ್ಥರಾದ ಅನಂದಭಾಯಿ ಗುರೂಜಿಯವರು ಭಾನುವಾರ ಸುದ್ದಿ ಬಿಡುಗಡೆ ಪ್ರತಿನಿಧಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ನವ್ಯ ದಂಪತಿಗಳ ಯಶೋನಂದನ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಆಶೀರ್ವದಿಸಿದರು.
ರಾಜಸ್ಥಾನದ ಅಬು ಪರ್ವತದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಗತ್ತಿನ ಹಲವು ದೇಶಗಳಲ್ಲಿ ತನ್ನ ಶಾಂತಿ ಮತ್ತು ಆಧ್ಯಾತ್ಮಿಕ ಮನ ಪರಿವರ್ತನೆಯ ಮೂಲಕ ಜನ ಕಲ್ಯಾಣದ ಸೇವೆಯನ್ನು ಮಾಡುತ್ತಿದ್ದು ಲಕ್ಷಾಂತರ ಶಿವ ಬಾಬರ ಅನುಯಾಯಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ.ಮಾನಸಿಕ ಒತ್ತಡ ನಿವಾರಣೆಗೆ ಜ್ಯೋತಿ ಸ್ವರೂಪ ಭಗವಂತನ ಧ್ಯಾನ ಮಾಡುವ ರಾಜಯೋಗವನ್ನು ಈ ಸಂಸ್ಥೆ ಕಳಿಸಿಕೊಡುತ್ತಿದ್ದು ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸಾವಿರಾರು ಕೇಂದ್ರಗಳಿವೆ.
ಮೂಲತಃ ಬಳಂಜದವರಾದ ಆನಂದ ಭಾಯಿ ಗುರೂಜಿಯವರು ಹಲವಾರು ವರ್ಷಗಳಿಂದ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡು ಶಾಂತಿ ಮಂತ್ರದ ಮೂಲಕ ಜನರನ್ನು ಸಾತ್ವಿಕತೆಯ ಕಡೆಗೆ ಸಾಗುವ ಸೇವೆಯನ್ನು ಮಾಡುತ್ತಿದ್ದು ಅವರ ಮನ ಮುಟ್ಟುವ ಮಾತುಗಳಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಾವಿರಾರು ಜನರು ವ್ಯಸನ ಮುಕ್ತ ಜೀವನ ನಡೆಸುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಮಹಾರಾಷ್ಟ್ರ ಸರಕಾರ ಇವರ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಗಮನಿಸಿ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.ಕುಟುಂಬ ಶಾಂತಿಯಿಂದ ಇರಬೇಕಾದರೆ ಮೊದಲು ಮನೆಯ ವಾತಾವರಣವನ್ನು ಶಾಂತಿಯಿಂದ ಇಟ್ಟುಕೊಳ್ಳಬೇಕು ಎಂದು ಹೇಳಿದ ಗುರೂಜಿಯವರು ಗಂಡ ಹೆಂಡತಿಯ ಮಧ್ಯೆ ಅನುಮಾನಗಳು ಮತ್ತು ಜೀವನ ಇಡೀ ಸಂಶಯದಿಂದಲೇ ಸಾಗಿದರೆ ಮಾನಸಿಕ ಶಾಂತಿ ಸಿಗುವುದಿಲ್ಲ.ಮನೆಯ ಒಟ್ಟು ಪರಿವಾರ ಶಾಂತಿಯನ್ನು ಹುಡುಕುವ ಪ್ರಯತ್ನ ಮಾಡುವ ಮೊದಲು ನಿಮ್ಮ ಮನಸ್ಸು ಮತ್ತು ಆತ್ಮವನ್ನು ಶಾಂತಿಯ ಮಂದಿರವಾಗಿ ಪರಿವರ್ತನೆ ಮಾಡಿಕೊಳ್ಳಿ ಎಂದು ಶುಭವನ್ನು ಹಾರೈಸಿದರು.
ಇನ್ನೋರ್ವ ಆಧ್ಯಾತ್ಮಿಕ ಸಾಧಕರಾದ ಜಯರಾಜ್ ಹೆಗ್ಡೆ, ಕುಮಾರಿ ಗೀತಾ ಟೀಚರ್ ಉಪಸ್ಥಿತರಿದ್ದರು.ಹಿರಿಯರಾದ ಮೋಹನ್ ಹೆಗ್ಡೆ ಉಪಸ್ಥಿತರಿದ್ದರು.ಸದಾನಂದ ಸಾಲಿಯಾನ್ ನವ್ಯ ದಂಪತಿಗಳು ಹಾಗೂ ಮಕ್ಕಳಾದ ಸಮ್ಯಕ್ ಮತ್ತು ಸಾನ್ವಿಕ್ ಆನಂದ ಭಾಯಿ ಗುರೂಜಿಯವರನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.ಕುಮಾರಿ ಶರಣ್ಯ ಡಿ.ವಂದಿಸಿದರು.