ಉಜಿರೆ; ಬಹು ಬೇಡಿಕೆಯ ಉಜಿರೆ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಜಾಗ ಮಂಜೂರು ಮಾಡಿದ್ದು ಇದರ ಮೌಲ್ಯವನ್ನು ಪಾವತಿಸಲು ಮೆಸ್ಕಾಂಗೆ ಸೂಚನೆ ನೀಡಲಾಗಿದೆ. ಉಜಿರೆ ಮೆಸ್ಕಾಂ ಉಪ ವಿಭಾಗದಲ್ಲಿ ಸುಮಾರು 45 ಸಾವಿರಕ್ಕಿಂತ ಅಧಿಕ ಬಳಕೆದಾರರಿಗೆ ಧರ್ಮಸ್ಥಳ, ಬೆಳ್ತಂಗಡಿ, ಗುರುವಾಯನಕೆರೆ ಮೊದಲಾದ ಉಪ ಕೇಂದ್ರಗಳ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಉಜಿರೆಗೆ ಪ್ರತ್ಯೇಕ ಉಪಕೇಂದ್ರ ಇಲ್ಲದ ಕಾರಣ ಬೇಸಿಗೆಯಲ್ಲಿ ಓವರ್ ಲೋಡ್ ಆಗುತ್ತಿದ್ದು ಉಜಿರೆ ಉಪ ವಿಭಾಗದಲ್ಲಿ, ತಾಲೂಕಿನಲ್ಲಿ ಸಾಕಷ್ಟು ವಿದ್ಯುತ್ ಸಮಸ್ಯೆಗಳು ಕಂಡು ಬರುತ್ತಿವೆ. ತಾಲೂಕಿನ ಮುಖ್ಯ ಪಟ್ಟಣವಾಗಿರುವ ಉಜಿರೆಯಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ಹೋಟೆಲ್, ಕೃಷಿ, ಕೈಗಾರಿಕೆ, ವಾಣಿಜ್ಯ ಮಳಿಗೆ ಇತ್ಯಾದಿ ಹೆಚ್ಚಿನ ವ್ಯವಹಾರಗಳಿದ್ದು ಇಲ್ಲಿ ವಿದ್ಯುತ್ ಕಡಿತ ಉಂಟಾಗುವ ಕಾರಣ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತಿವೆ. ಇಲ್ಲಿಗೆ ಪ್ರತ್ಯೇಕ ಉಪ ಕೇಂದ್ರ ನಿರ್ಮಿಸಿ ಗುಣಮಟ್ಟದ ವಿದ್ಯುತ್ ಪೂರೈಸುವ ಬಗ್ಗೆ ಗ್ರಾಮ ಸಭೆ, ವಿದ್ಯುತ್ ಅದಾಲತ್, ಮೆಸ್ಕಾಂ ಜನ ಸಂಪರ್ಕ ಸಭೆಗಳಲ್ಲಿ ಗ್ರಾಹಕರಿಂದಲೂ ಹೆಚ್ಚಿನ ಅಹವಾಲುಗಳು ಸಲ್ಲಿಕೆಯಾಗುತ್ತಿದ್ದವು.
ಉಜಿರೆಗೆ ಪ್ರತ್ಯೇಕ ವಿದ್ಯುತ್ ಉಪಕೇಂದ್ರ ನಿರ್ಮಿಸುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ಸಾಕಷ್ಟು ಕೃಷಿ ತೋಟಗಳು ಇದ್ದು ವಿದ್ಯುತ್ ಕಡಿತದಿಂದ ತೋಟಗಳಿಗೆ ಬೇಸಿಗೆಯಲ್ಲಿ ನೀರು ನೀಡಲು ಕೃಷಿಕರು ಪರದಾಡುವ ಪರಿಸ್ಥಿತಿ ಏರ್ಪಡುತ್ತಿತ್ತು. ವಿದ್ಯುತ್ ಹೊರೆಯನ್ನು ತಗ್ಗಿಸಲು ಉಜಿರೆಯ ನಿನ್ನಿಕಲ್ಲಿನಲ್ಲಿ ಪ್ರತ್ಯೇಕ 33/11 ಉಪ ಕೇಂದ್ರ ನಿರ್ಮಿಸಲು ಮೆಸ್ಕಾಂನಿಂದ ಸಲ್ಲಿಸಲಾಗಿದ್ದ ಮನವಿಗೆ ಈ ಹಿಂದೆ ತಾಂತ್ರಿಕ ಅನುಮೋದನೆ ದೊರಕಿತ್ತು. ಇಲ್ಲಿನ ಸರ್ವೆ ನಂಬರ್ 393/3ರಲ್ಲಿ 0.96 ಎಕರೆ ಜಮೀನನ್ನು ಉಪಕೇಂದ್ರ ನಿರ್ಮಾಣಕ್ಕೆ ಗುರುತಿಸಲಾಗಿತ್ತು. ಇದೀಗ ಇದಕ್ಕೆ ಜಿಲ್ಲಾಧಿಕಾರಿಯವರು ಮಂಜೂರು ಆದೇಶ ಹೊರಡಿಸಿದ್ದು ಇದರ ಮೌಲ್ಯ ಹಾಗೂ ಶುಲ್ಕಗಳ ಮೆಸ್ಕಾಂನಿಂದ 46,87,715 ರೂ.ಗಳನ್ನು ಪಾವತಿಸುವಂತೆ ಉಜಿರೆ ಉಪ ವಿಭಾಗಕ್ಕೆ ಸೂಚಿಸಲಾಗಿದೆ. ಈ ಬಗ್ಗೆ ತಾಂತ್ರಿಕ, ಕಚೇರಿ ಕೆಲಸಗಳು ಆರಂಭವಾಗಿವೆ. ಹೆಚ್ಚಿನ ಎಲ್ಲಾ ಕೆಲಸ, ಮೊತ್ತ ಪಾವತಿ ತ್ವರಿತವಾಗಿ ಮುಗಿಸಿದರೆ ಉಪ ಕೇಂದ್ರ ನಿರ್ಮಾಣ ಕಾಮಗಾರಿ ಕೂಡಲೇ ಆರಂಭಿಸಬಹುದಾಗಿದೆ.
ತಾಲೂಕಿಗೆ ಅನುಕೂಲ: ಉಜಿರೆಯಲ್ಲಿ ಉಪ ಕೇಂದ್ರ ನಿರ್ಮಾಣವಾಗುವ ಕಾರಣ ಇತರ ಉಪ ಕೇಂದ್ರಗಳ ಹೊರೆ ತಗ್ಗುವುದರಿಂದ ಇದು ಇಡೀ ಬೆಳ್ತಂಗಡಿ ತಾಲೂಕಿನ ವಿದ್ಯುತ್ ಪೂರೈಕೆ ವ್ಯವಸ್ಥೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಲೋಡ್ ಶೆಡ್ಡಿಂಗ್, ರೋಸ್ಟರ್, ಪವರ್ ಕಟ್‌ನಿಂದ ಬಳಲುತ್ತಿರುವ ತಾಲೂಕಿನ ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗಲಿದೆ. ಒಂದು ಉಪ ಕೇಂದ್ರದಲ್ಲಿ ಲೈನ್ ಫಾಲ್ಟ್ ಉಂಟಾದಾಗ ವಿದ್ಯುತ್ ಒದಗಿಸಲು ಸಹಕಾರಿಯಾಗಲಿದೆ. ಕಕ್ಕಿಂಜೆ ವಿದ್ಯುತ್ ಉಪ ಕೇಂದ್ರದ ಸಂಪರ್ಕ ಕಾಡು, ನದಿಗಳ ಮೂಲಕ ಹಾದುಹೋಗಿದ್ದು ಇಲ್ಲಿ ತಂತಿಗಳ ಮೇಲೆ ಮರ ಬೀಳುವುದು ಇತ್ಯಾದಿ ಸಾಮಾನ್ಯವಾಗಿದೆ. ಒಂದೆಡೆ ಸಮಸ್ಯೆ ಉಂಟಾದರೆ ಇಡೀ ಉಪ ಕೇಂದ್ರದ ಸಂಪರ್ಕವು ಕೆಲವೊಮ್ಮೆ ಕಡಿತಗೊಳ್ಳುತ್ತದೆ. ಇಂತಹ ಸಮಯದಲ್ಲಿ ನಿಗದಿತ ಪ್ರದೇಶಗಳಿಗೆ ಉಜಿರೆ ಉಪಕೇಂದ್ರದಿಂದ ವಿದ್ಯುತ್ ನೀಡಲು ಅನುಕೂಲವಾಗಲಿದೆ. ಇದಕ್ಕೆ ಬೇಕಾಗಿರುವ ವಿದ್ಯುತ್ ಲೈನ್ ಹಲವಾರು ವರ್ಷಗಳ ಹಿಂದೆ ನಿರ್ಮಾಣವಾಗಿದೆ.
10 ಎಂವಿಎ ಟ್ರಾನ್ಸ್ ಫಾರ್ಮರ್: ಉಜಿರೆಯ ನಿನ್ನಿಕಲ್ಲಿನಲ್ಲಿ ನಿರ್ಮಾಣವಾಗಲಿರುವ 33/11 ಕೆ.ವಿ. ಉಪ ಕೇಂದ್ರದಲ್ಲಿ ಸದ್ಯ 10 ಎಂವಿಎ ಸಾಮರ್ಥ್ಯದ ಒಂದು ಟ್ರಾನ್ಸ್‌ಫಾರ್ಮರ್ ಸ್ಥಾಪನೆಯಾಗಲಿದೆ. ಇನ್ನೊಂದು 10 ಎಂವಿಎ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೂ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತದೆ. ವಿದ್ಯುತ್ ಹೊರೆ ಹೆಚ್ಚಾದಾಗ ಇದನ್ನು ಅಳವಡಿಸುವ ಚಿಂತನೆ ಇದೆ. ಪ್ರಸ್ತುತ 10 ಎಂವಿಎ ಸಾಮರ್ಥ್ಯದ ಒಂದು ಟ್ರಾನ್ಸ್ಫಾರ್ಮರ್ ಅಳವಡಿಕೆಯಿಂದ ಹೆಚ್ಚಿನ ಓವರ್ ಲೋಡ್ ತಗ್ಗಲಿದೆ. ಧರ್ಮಸ್ಥಳ, ಬೆಳ್ತಂಗಡಿ, ಗುರುವಾಯನಕೆರೆ ಮೊದಲಾದ ಉಪಕೇಂದ್ರಗಳ ಹೆಚ್ಚಿನ ಹೊರೆ ತಪ್ಪಲಿದೆ. ಪ್ರಸಕ್ತ ಇರುವ ಎರಡು ಫೀಡರ್‌ಗಳ ಬದಲು ಬೆಳಾಲು, ಮಾಚಾರು, ಎಸ್‌ಡಿಎಂ, ಉಜಿರೆ, ಗುರುಪಳ್ಳ, ಸೋಮಂತಡ್ಕ ಫೀಡರ್ ಕಾರ್ಯ ನಿರ್ವಹಿಸಲಿವೆ. ಹೆಚ್ಚುವರಿ ಫೀಡರ್‌ಗಳು ಕಾರ್ಯನಿರ್ವಹಿಸುವ ಕಾರಣ ಈ ಫೀಡರ್‌ಗಳ ವ್ಯಾಪ್ತಿಯ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ.