ಉಜಿರೆ: 40 ವರ್ಷಗಳ ಹಿಂದೆ ಗೇರು ಕೃಷಿಗೆ ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆಯಿಂದ ವಿಷಕಾರಿ ಅಂಶ ಜಿಲ್ಲೆಯ ಜನರ ಜೀವನದಲ್ಲಿ ಬೆರೆತು ಅಂಗವಿಕಲತೆ, ಕ್ಯಾನ್ಸರ್ ಇತ್ಯಾದಿ ದುರ್ಗತಿಗೆ ಕಾರಣವಾಗಿದೆ.ಸಂತ್ರಸ್ತ ಮಕ್ಕಳಿಗೆ ಸಾನಿಧ್ಯದಂತಹ ಸಂಸ್ಥೆಗಳು ನೆರವಾಗುತ್ತಿರುವುದು ಆಶಾಕಿರಣವಾಗಿದೆ.
ಮಕ್ಕಳು ಚೇತನರಾಗಿ ಓಡಾಡಿ ಸ್ವಂತ ಕಾಲಮೇಲೆ ನಡೆದರೆ ಅವರೂ ಇತರರಿಗೆ ಸರಿಸಾಟಿಯಾಗಬಲ್ಲರು, ದೀಪಾವಳಿಯ ಬೆಳಕು ಅವರ ಬಾಳಲ್ಲಿ ಬೆಳಕಾಗಿ ಭವಿಷ್ಯ ಉಜ್ವಲವಾಗಲಿ ಎಂದು ಬೆಳ್ತಂಗಡಿ ತಹಸೀಲ್ದಾರ್ ಸುರೇಶ ಕುಮಾರ್ ನುಡಿದರು.
ಅವರು ನ.10ರಂದು ಉಜಿರೆಯ ಸಾನಿಧ್ಯ (ಎಂಡೋಸಂತ್ರಸ್ತ ಮಕ್ಕಳ) ಕೌಶಲ ತರಬೇತಿ ಕೇಂದ್ರದಲ್ಲಿ ದೀಪಾವಳಿ ಸಂಭ್ರಮಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಂಡೋಸಲ್ಫಾನ್ ಸಿಂಪಡಣೆಯಿಂದ 1419 ಮಂದಿ ಅಂಗವೈಕಲ್ಯತೆ ಹೊಂದಿದ್ದು, ಅವರಲ್ಲಿ 120 ಮಂದಿ ದೈವಾಧೀನರಾಗಿದ್ದಾರೆ.ಶೇ.60 ಅಂಗವಿಕಲತೆ ಹೊಂದಿದ 982 ಮಂದಿಗೆ ಮಾಸಿಕ ರೂ.4000, ಶೇ.60ಕ್ಕಿತ ಕಡಿಮೆ ಅಂಗವಿಕಲತೆಯ 380 ಜನರಿಗೆ ಮಾಸಿಕ ರೂ.2000 ಸರಕಾರದ ಮಾಸಾಶನ ಬರುತ್ತಿದ್ದು, ಶೇ.25ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿದವರಿಗೆ ಉಚಿತ ಔಷಧಿ ನೀಡಲಾಗುತ್ತಿದೆ.
ಮಕ್ಕಳ ಆರೈಕೆಗಾಗಿ ಸಂಘ ಸಂಸ್ಥೆಗಳೂ ನೆರವಾಗಿ ಆಸರೆಯಾಗಬೇಕು ಎಂದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಪಿ.ಜಿ. ಜಪಾನಿನ ಹಿರೊಸಾಕಿಯ ಬಾಂಬ್ ರೀತಿಯಲ್ಲಿ ಗೇರು ಕೃಷಿಗೆ ಪ್ರಾಯೋಗಿಕವಾಗಿ ಔಷಧಿ ಸಿಂಪಡಣೆಯಿಂದ ಉಂಟಾದ ಕಾಹಿಲೆಯಿಂದ ಶಾಶ್ವತ ಅಂಗವೈಕಲ್ಯತೆ ಸಮಸ್ಯೆ ಶಾಪವಾಗಿ ಪರಿಣಮಿಸಿದೆ.ನಿರ್ಲಕ್ಷ್ಯದಿಂದ ಈ ಮಟ್ಟಕ್ಕೆ ತಲುಪಿದ ಮಕ್ಕಳ ಬಾಧೆಯನ್ನು ದೇವರು ಮುಕ್ತಗೊಳಿಸಲಿ ಎಂದು ಆಶಿಸಿದರು.
ನಿವೃತ್ತ ಸೈನಿಕ ಶಿವಕುಮಾರ್ ದೇವರ ಮಕ್ಕಳಿಗೆ ಒಳ್ಳೆಯದಾಗಲಿ.ಅವರ ಸೇವೆ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು.ಸಾನಿಧ್ಯದ ಹಿತೈಷಿ ರೋಷನ್ ಸಿಕ್ವೇರಾ ದೀಪದ ಬೆಳಕಿನ ಪ್ರೇಮ,ಮಮಕಾರ,ಮಮತೆ ನಿರಂತರವಾಗಿರಲಿ.ನಮ್ಮಲ್ಲಿ ದ್ವೇಷ,ಅಸೂಯೆ,·ಮತ್ಸರಕ್ಕೆ ಕೊನೆಗಾಣಿಸಿ ಬದುಕು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.
ಉಜಿರೆ ಎಸ್ ಡಿ.ಎಂ.ಪ.ಪೂ ಕಾಲೇಜು ಉಪನ್ಯಾಸಕಿಯರಾದ ಅರ್ಚನಾ ಮತ್ತು ಕವನಶ್ರೀ,ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು. ಎಸ್ ಡಿ.ಎಂ.ಪದವಿ ಪೂರ್ವ ಕಾಲೇಜಿನ ರೆಡ್ ಕ್ರಾಸ್ ಸದಸ್ಯರು ಉಪಸ್ಥಿತರಿದ್ದು ಎಂಡೋ ಸಂತ್ರಸ್ತ ಮಕ್ಕಳೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ಸಹಭಾಗಿಗಳಾಗಿದ್ದರು.
ಸಾನಿಧ್ಯ ಕೇಂದ್ರದ ಮೇಲ್ವಿಚಾರಕಿ ಮಲ್ಲಿಕಾ ಸ್ವಾಗತಿಸಿ, ಶಿಕ್ಷಕಿ ಅಕ್ಷತಾ ಕೆ. ನಿರೂಪಿಸಿದ ಕಾರ್ಯಾಕ್ರಮದಲ್ಲಿ ಶಿಕ್ಷಕಿ ಸಂಗೀತ ವಂದಿಸಿದರು.ಸಾನಿಧ್ಯ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು.