ಹೊಸ್ಮಾರು: ಆರೋಗ್ಯ ಕ್ಷೇತ್ರದ ಸವಾಲುಗಳ ಜೊತೆ ಆರೋಗ್ಯರಕ್ಷಣೆ ಪರಿಕಲ್ಪನೆ ಹಾಗೂ ವ್ಯಾಖ್ಯಾನಗಳೂ ಬದಲಾಗುತ್ತಿವೆ.ಕಾಯಿಲೆ ಮತ್ತು ಚಿಕಿತ್ಸೆ ಎಂಬ ಉದ್ದೇಶದ ಬದಲು ಸಮಗ್ರ ಆರೋಗ್ಯಪೂರ್ಣ ಬದುಕಿನ ಪರಿಕಲ್ಪನೆ ಆದ್ಯತೆಯಾಗುತ್ತಿದೆ.ವೈದ್ಯಲೋಕವೂ ಇದಕ್ಕೆ ಸಂವಾದಿಯಾಗಿ ಪ್ರತಿಕ್ರಿಯಿಸಬೇಕಾದ್ದು ಅಗತ್ಯ ಎಂದು ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯ ಹಾಸನ ಸಂಸ್ಥೆಯ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಅಭಿಪ್ರಾಯಪಟ್ಟರು.
ಹೊಸ್ಮಾರಿನಲ್ಲಿ ವಿಜಯ ಪಾಲಿ ಕ್ಲಿನಿಕ್ ಹಾಗೂ ಮಣಿಪಾಲ ಸಮೂಹ ಆಸ್ಪತ್ರೆಗಳ ಸಹಯೋಗದಲ್ಲಿ ತಜ್ಞ ವೈದ್ಯರುಗಳ ಸಂದರ್ಶನ ಮತ್ತು ಚಿಕಿತ್ಸಾ ಸೇವೆ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕಿತ್ಸಾ ಪದ್ದತಿ ಚರ್ಚೆಗಿಂತ ಚಿಕಿತ್ಸೆ, ಪರಿಣಾಮಗಳ ಕುರಿತು ಲಕ್ಷ್ಯ ಮುಖ್ಯ.ಭಾರತದ ಪ್ರಾಚೀನ ವೈದ್ಯಪರಂಪರೆ ಈಗ ಜಾಗತಿಕವಾಗಿ ಮತ್ತೆ ಮುನ್ನೆಲೆಗೆ ಬರುತ್ತಿದೆ.ಕ್ಯಾಲಿಫೋರ್ನಿಯಾ ವೈದ್ಯ ವಿಶ್ವವಿದ್ಯಾಲಯ ಅಲ್ಲಿ ಬಿ.ಎ.ಎಂ.ಎಸ್ ಆಯುರ್ವೇದ ಕೋರ್ಸ್ ಆರಂಭಿಸಿದೆ.ಭಾರತ ಸರಕಾರವೂ ಹೀಲ್ ಇನ್ ಇಂಡಿಯಾ-ಹೀಲ್ ಬೈ ಇಂಡಿಯಾ ಎಂಬ ಘೋಷಣೆ ಮೂಲಕ ಹೊಸ ಪ್ರೋತ್ಸಾಹ ನೀಡುತ್ತಿದೆ. ಆಯುಷ್ ವೀಸಾ ಯೋಜನೆ ಪ್ರಪಂಚದ ಯಾವುದೇ ವ್ಯಕ್ತಿಯೂ ಯಾವುದೇ ಹಳ್ಳಿಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದಾದ ಅವಕಾಶ ನೀಡಿದೆ.ಇದಕ್ಕೆ ಸಂವಾದಿಯಾಗಿ ಗ್ರಾಮಾಂತರ ಹಳ್ಳಿಗಳ ಸ್ವಚ್ಛ ಪರಿಸರದಲ್ಲಿ 10 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆಗೂ ಅವಕಾಶ ದೊರಕಿದೆ.ಹೊಸ್ಮಾರಿನ ಈ ಆಸ್ಪತ್ರೆ ಸರ್ವರಿಗೂ ಆರೋಗ್ಯ ಒದಗಿಸಿ, ಸರಕಾರದ ಈ ಲಕ್ಷ್ಯ ತಲುಪುವಲ್ಲಿ ಒಂದು ಹೆಜ್ಜೆಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರ್ಕಳ ಟಿ ಎಂ ಎ ಪೈ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್ ಮಾತನಾಡಿ ಹಳ್ಳಿಯ ಕಡೆಗೆ ಆರೋಗ್ಯ ಸೇವೆಯನ್ನು ಒಯ್ಯುವ, ಮನೆಮನೆಗೆ ತಲುಪಿಸುವ ಜವಾಬ್ದಾರಿ ಭವಿಷ್ಯದ ವೈದ್ಯರುಗಳ ಮೇಲಿದೆ ಎಂದರು.
ಬ್ರಹ್ಮಾವರ ಪೇತ್ರಿಯ ಅನುಗ್ರಹ ಕ್ಲಿನಿಕ್ ವೈದ್ಯ ದಂಪತಿಗಳಾದ ಡಾ.ಪ್ರವೀಣಕುಮಾರ್ ಡಾ.ಅಶ್ವಿನಿ ಪ್ರವೀಣಕುಮಾರ್ ಆಸ್ಪತ್ರೆಯ ಕ್ಷ ಕಿರಣ ವಿಭಾಗ ಉದ್ಘಾಟಿಸಿದರು.
ತಜ್ಞ ವೈದ್ಯರುಗಳಾದ ಡಾ.ಚಿದಾನಂದ ಕುಲಕರ್ಣಿ ಡಾ.ಮೃಣಾಲಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಶುಭ ಹಾರೈಸಿದರು .
ಡಾ.ಪ್ರಸಾದ್ ಶೆಟ್ಟಿ ಹೆತ್ತವರಾದ ಲೇಖಕ ನಿವೃತ್ತ ಕನ್ನಡ ಪಂಡಿತ ಎಂ.ಬಾಬು ಶೆಟ್ಟಿ ನಾರಾವಿ, ವಿಮಲಾ ಬಾಬು ಶೆಟ್ಟಿ ಉಪಸ್ಥಿತರಿದ್ದರು.
ವಿಜಯ ಪಾಲಿ ಕ್ಲಿನಿಕ್ ಪ್ರವರ್ತಕ ಡಾ.ಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು.ಅಜಿತ್ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ವಿನೋದಾ ಪ್ರಸಾದ್ ಶೆಟ್ಟಿ ವಂದಿಸಿದರು .