ಬೆಳ್ತಂಗಡಿ: ಸಿಪಿಐಎಂ ಮುಖಂಡ, ದ.ಕ.ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಕ್ಷದ ಹಿರಿಯ ಸಂಗಾತಿ ಯಲ್.ಮಂಜುನಾಥ್ (68 ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಅ.23ರಂದು ಆಸ್ಪತ್ರೆಯಲ್ಲಿ ಮೃತರಾದರು.
1970 ದಶಕದಿಂದ ಕಾಮ್ರೇಡ್ ಕೆ.ವಿ.ರಾವ್. (ಎಳ್ಚಿತ್ತಾಯ) ಅವರ ಜೊತೆ ಕಮ್ಯುನಿಸ್ಟ್ ಚಳವಳಿಯಲ್ಲಿ ಗುರುತಿಸಿಕೊಂಡವರು.ಉಳುವವನೇ ಹೊಲದೊಡೆಯ, ಅಕ್ರಮಸಕ್ರಮ ಮೊದಲಾದ ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಅವರು ಹಲವು ಕೇಸುಗಳನ್ನು, ಜೈಲುವಾಸವನ್ನು ಅನುಭವಿಸಿದವರು.ಬೀಡಿ ಕಾರ್ಮಿಕ ಚಳವಳಿಯನ್ನು ಬೆಳ್ತಂಗಡಿಯಲ್ಲಿ ಹುಟ್ಟು ಹಾಕಿದವರಲ್ಲಿ ಪ್ರಮುಖ ಸಮರ ದೀರ ಹೋರಾಟಗಾರರಾದ ದಿವಂಗತರು, ಬೆಳ್ತಂಗಡಿಯಲ್ಲಿ 1998 ರಲ್ಲೇ ಕಟ್ಟಡ ಕಾರ್ಮಿಕ ಸಂಘಟನೆ, 2003 ರಲ್ಲೇ ಬಿಸಿಯೂಟ ಸಂಘಟನೆಗಳ ಕಟ್ಟಿ ಬೆಳೆಸಲು ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿದ್ದರು.
ಅವರು ಅಟೋ, ಸಾರಿಗೆ, ಅಂಗನವಾಡಿ, ಮೊದಲಾದ ಸಂಘಟನೆಗಳಲ್ಲೂ, ಮೈಕ್ರೋ ಪೈನಾನ್ಸ್ ದೌರ್ಜನ್ಯದ ವಿರುದ್ದ ನಡೆದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಶೊಷಕರ ಪಾಲಿಗೆ ಸಿಂಹ ಸ್ವಪ್ನರಾಗಿದ್ದ ಅವರು ಕಾರ್ಮಿಕರ ಪರ ರಾಜಿ ಇಲ್ಲದ ಹೋರಾಟಗಾರರಾಗಿದ್ದರು.ರೈತರಿಗೆ ಕಾರ್ಮಿಕರಿಗೆ ಅನ್ಯಾಯ, ಮೋಸ ಮಾಡಿದವರ ವಿರುದ್ದ ಸಿಡಿದೇಳುತ್ತಿದ್ದ ಅವರು ನ್ಯಾಯ ಸಿಗದೆ ಬಿಡುತ್ತಿರಲಿಲ್ಲ.
ಯಲ್.ಮಂಜುನಾಥ್ ಅವರ ಈ ಅಗಲಿಕೆ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಸಿಪಿಐಎಂ ಬೆಳ್ತಂಗಡಿ ತಾ. ಸಮಿತಿ ಹೇಳಿಕೆ- ಬಿ.ಎಂ.ಭಟ್ ಸಂತಾಪ ಸೂಚಿಸಿದ್ದಾರೆ.