

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯಲ್ಲಿ ಸುಮಾರು 50 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳ ಬಾಳು ಬೆಳಗಿಸಿ, ಬಡವ ಬಲ್ಲಿದರ ಬಾಳ ಬೆಂಗಾವಲಾಗಿ, ಸಮಾಜ ಸೇವಕಿಯಾಗಿ ಸಂಪನ್ಮೂಲ ವ್ಯಕ್ತಿಯಾಗಿ, ಚರ್ಚ್ ವ್ಯಾಪ್ತಿಯಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರೀಯಾಶೀಲ ಮುಖಂಡರಾಗಿ ಸಹೋದ್ಯೋಗಿಗಳಿಗೆ ಮಮತೆಯ ಮಾತೆ – ಹಿರಿಯ ಸಹೋದರಿಯಾಗಿ, ಆಪದ್ಬಾಂಧವರಾಗಿ, ವಿವಿಧ ಕ್ಷೇತ್ರಗಳಲ್ಲಿ ಪ್ರೇರಣಾ ಶಕ್ತಿಯಾಗಿ, ಜೀವನ ಸಾರ್ಥಕಗೊಳಿಸಿ ಇಂದು ಪೂರ್ವಾಹ್ನ ದೇವರ ಪಾದ ಕಮಲವಾಗಿ ಚಿರಶಾಂತಿ ಪಡೆದ ಆದರ್ಶ ಶಿಕ್ಷಕಿ ಶ್ರೀಮತಿ ಮೇರಿ ಗ್ರೇಸ್ ಮೋರಿಸ್‌ರವರಿಗೆ ಸಂತ ತೆರೇಸಾ ಶಿಕ್ಷಣ ಸಂಸ್ಥೆಗಳ ಪರವಾಗಿ ಶ್ರದ್ದಾಂಜಲಿಯನ್ನು ಅರ್ಪಿಸುತ್ತೇವೆ.
ಪರ್ವತದಿಂದ ಹರಿಯುವ ನದಿಗೇನು ತಿಳಿದಿದೆ ತನ್ನ ಪಯಣ ಎಲ್ಲಿಗೆಂದು?
ಬೀಸುವ ಗಾಳಿಗೇನು ತಿಳಿದಿದೆ ತನ್ನ ಚಲನೆ ಯಾವ ದಿಕ್ಕಿಗೆಂದು ?
ಅರಳಿದ ಹೂವಿಗೇನು ತಿಳಿದಿದೆ ತನ್ನ ಸಮರ್ಪಣೆ ಯಾವಾಗ ದೇವರ ಪಾದಕ್ಕೆಂದು?
ತನಗಾಗಿ ಉರಿಯುವುದು ದೀಪವಲ್ಲ
ತನಗಾಗಿ ಅರಳುವುದು ಹೂವಲ್ಲ
ತನಗಾಗಿ ಬಾಳುವುದು ಬಾಳಲ್ಲ
75 ವರ್ಷದ ತನ್ನ ಬಾಳನ್ನು ಪರರಿಗಾಗಿ ಬಾಳಿ ಅಮರರಾದ ನಮ್ಮ ನೆಚ್ಚಿನ ಶಿಕ್ಷಕಿ ಮೇರಿ ಟೀಚರ್ ನಿಮಗಿದೋ ನಮ್ಮ ನಮನಗಳು.